-->
 ಉಡುಪಿಯಲ್ಲಿ ಅ. 24ರಿಂದ ಕೆನರಾ ರಿಟೇಲ್ ಮೇಳ: ಮನೆ, ವಾಹನ ಖರೀದಿಗೆ ಸ್ಥಳದಲ್ಲೇ ಸಾಲ ಸೌಲಭ್ಯ

ಉಡುಪಿಯಲ್ಲಿ ಅ. 24ರಿಂದ ಕೆನರಾ ರಿಟೇಲ್ ಮೇಳ: ಮನೆ, ವಾಹನ ಖರೀದಿಗೆ ಸ್ಥಳದಲ್ಲೇ ಸಾಲ ಸೌಲಭ್ಯ


ದೀಪಾವಳಿ ಹಬ್ಬದ ಪ್ರಯುಕ್ತ ಕೆನರಾ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಚೇರಿ ವತಿಯಿಂದ ಅ. 24 ಮತ್ತು 25ರಂದು ಉಡುಪಿಯ ಎಂಜಿಎಂ ಕಾಲೇಜಿನ ಮೈದಾನದಲ್ಲಿ ‘ಕೆನರಾ ರಿಟೇಲ್ ಮೇಳ-2026’ ಆಯೋಜಿಸಲಾಗಿದೆ ಎಂದು ಕೆನರಾ ಬ್ಯಾಂಕ್‌ನ ಮಣಿಪಾಲ ವೃತ್ತ ಕಚೇರಿಯ ಪ್ರಧಾನ ವ್ಯವಸ್ಥಾಪಕ ಎಚ್. ಗಂಗಾಧರ್ ತಿಳಿಸಿದರು.

ಈ ಕುರಿತು ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೇಳವು ಎರಡೂ ದಿನ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ನಡೆಯಲಿದ್ದು, ಗ್ರಾಹಕರಿಗೆ ವಿವಿಧ ಸಾಲ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಹಾಗೂ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಭಾಗವಹಿಸಲಿದ್ದಾರೆ ಎಂದರು.

ಕೆನರಾ ಬ್ಯಾಂಕ್ ಕಳೆದ 10 ವರ್ಷಗಳಿಂದ ರಿಟೇಲ್ ಮೇಳವನ್ನು ಆಯೋಜಿಸುತ್ತಿದ್ದು, ಗ್ರಾಹಕರಿಗೆ ವಿವಿಧ ಸಾಲ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಬಾರಿಯ ಮೇಳದಲ್ಲಿ ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ಸಂಸ್ಥೆಗಳು, ವಾಹನ ಡೀಲರ್‌ಗಳು ಹಾಗೂ ಸೋಲಾರ್ ಉತ್ಪನ್ನಗಳ ಡೀಲರ್‌ಗಳು ಭಾಗವಹಿಸಲಿದ್ದಾರೆ. ಮನೆ ನಿರ್ಮಾಣ, ನಿವೇಶನ ಖರೀದಿ, ವಾಹನ ಖರೀದಿ ಸೇರಿದಂತೆ ವಿವಿಧ ಅಗತ್ಯಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸಾಲ ಸೌಲಭ್ಯಗಳನ್ನು ಗ್ರಾಹಕರು ಒಂದೇ ಸ್ಥಳದಲ್ಲಿ ಪಡೆದುಕೊಳ್ಳಬಹುದು.

ಮೇಳದಲ್ಲಿ ಶೇ. 7.4ರ ಬಡ್ಡಿದರದಲ್ಲಿ ಗೃಹ ಸಾಲ ಹಾಗೂ ಶೇ. 7.70ರ ಬಡ್ಡಿದರದಲ್ಲಿ ವಾಹನ ಸಾಲ ಸೌಲಭ್ಯ ಲಭ್ಯವಿರಲಿದೆ. ಗ್ರಾಹಕರ ಅನುಕೂಲಕ್ಕಾಗಿ ಸ್ಥಳದಲ್ಲೇ ಸಾಲ ಮಂಜೂರಾತಿ ಪ್ರಕ್ರಿಯೆ ನಡೆಸಲು ವಿಶೇಷ ಕೇಂದ್ರ ತೆರೆಯಲಾಗುತ್ತದೆ. ಅಗತ್ಯ ದಾಖಲೆಗಳೊಂದಿಗೆ ಆಗಮಿಸುವ ಗ್ರಾಹಕರಿಗೆ ಸಾಲ ಸೌಲಭ್ಯ ಪಡೆಯುವ ಪ್ರಕ್ರಿಯೆಯಲ್ಲಿ ನೆರವು ನೀಡಲು ಪ್ರತ್ಯೇಕ ಸಹಾಯ ಕೌಂಟರ್‌ಗಳನ್ನೂ ತೆರೆಯಲಾಗುವುದು. ಯಾವುದೇ ನಿರ್ವಹಣಾ ಶುಲ್ಕವಿಲ್ಲದೆ ಸ್ಥಳದಲ್ಲೇ ಸಾಲ ಮಂಜೂರಾತಿ ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಗ್ರಾಹಕರಿಗೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಮನೆ ಕಟ್ಟುವ ಅಥವಾ ನಿವೇಶನ ಖರೀದಿಸುವ ಕನಸು ಹೊಂದಿರುವವರು, ಹೊಸ ವಾಹನ ಖರೀದಿಸಲು ಬಯಸುವವರು ಹಾಗೂ ಸೌರಶಕ್ತಿ ಉತ್ಪನ್ನಗಳ ಕುರಿತು ಮಾಹಿತಿ ಪಡೆಯಲು ಇಚ್ಛಿಸುವವರು ಮೇಳಕ್ಕೆ ಭೇಟಿ ನೀಡಿ, ತಮಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಸೂಕ್ತ ದಾಖಲೆಗಳನ್ನು ತರಿಸಿಕೊಂಡು ಬಂದಲ್ಲಿ ಸ್ಥಳದಲ್ಲಿರುವ ಬ್ಯಾಂಕ್ ಸಿಬ್ಬಂದಿಯ ಸಹಾಯದೊಂದಿಗೆ ಸಾಲ ಪ್ರಕ್ರಿಯೆ ಮುಂದುವರಿಸಬಹುದು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕಿ ಅರ್ಚನಾ, ಡಿಜಿಎಂ ಮಹಾಮಾಯ ಪ್ರಸಾದ್ ಹಾಗೂ ಮೇಳದ ಸಂಚಾಲಕ ಕೌಶಿಕ್ ರೆಡ್ಡಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article