ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳಿಗೆ ಬೆದರಿಕೆ: ಓರ್ವನ ಬಂಧನ
ಭೂಗತ ಪಾತಕಿ ಹೇಮಂತ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳಿಗೆ ಕರೆ ಮಾಡಿ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಪು ತಾಲೂಕಿನ ಎರ್ಮಾಳು ಬಡಾ ಗ್ರಾಮದ ಬಟ್ರತೋಟ ಹೌಸ್ ನಿವಾಸಿ ಸುರೇಶ್ ಅಮೀನ್ (38) ಬಂಧಿತ. ಉಡುಪಿ ಜಿಲ್ಲೆಯ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು, ಶಿರ್ವಾ ಠಾಣೆಯಲ್ಲಿ ಒಂದು, ಕಾಪು ಠಾಣೆಯಲ್ಲಿ ಒಂದು ಹಾಗೂ ಮಣಿಪಾಲ ಠಾಣೆಯಲ್ಲಿ ಒಂದು ಸೇರಿದಂತೆ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದವು. ಜಿಲ್ಲೆಯ ವಿವಿಧೆಡೆ ವ್ಯವಹಾರ ನಡೆಸುತ್ತಿರುವ ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಕರೆಗಳನ್ನು ಮಾಡಲಾಗಿತ್ತು.
ಪ್ರಕರಣಗಳ ತನಿಖೆ ಮುಂದುವರಿಸಿದ ಪೊಲೀಸರು, ಸಂತ್ರಸ್ತ ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳ ಮೊಬೈಲ್ ಸಂಖ್ಯೆಗಳು ಮತ್ತು ಇತರ ಮಾಹಿತಿಗಳನ್ನು ಭೂಗತ ಪಾತಕಿ ಹೇಮಂತ ಪೂಜಾರಿಗೆ ಒದಗಿಸಿ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕಾಪು ತಾಲೂಕಿನ ಎರ್ಮಾಳು ಬಡಾ ಗ್ರಾಮದ ಬಟ್ರತೋಟ ಹೌಸ್ ನಿವಾಸಿ ಸುರೇಶ್ ಅಮೀನ್ (38) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ.
ದಾಖಲಾಗಿರುವ ಪ್ರಕರಣಗಳ ಪೈಕಿ ಒಂದರಲ್ಲಿ, ಬೇಡಿಕೆ ಇಟ್ಟ ಹಣವನ್ನು ನೀಡದೆ ಹಾಗೂ ದೂರವಾಣಿ ಕರೆಗಳನ್ನು ಸ್ವೀಕರಿಸದೆ ಇದ್ದ ಉದ್ಯಮಿಯೊಬ್ಬರನ್ನು ಕೊಲೆ ಮಾಡುವ ಬಗ್ಗೆ ಹೇಮಂತ ಪೂಜಾರಿ ಮತ್ತು ಸುರೇಶ್ ಅಮೀನ್ ಒಳಸಂಚು ರೂಪಿಸಿರುವುದು ತಾಂತ್ರಿಕ ಸಾಕ್ಷ್ಯಗಳ ಮೂಲಕ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಹೇಮಂತ ಪೂಜಾರಿ ಸುರೇಶ್ ಅಮೀನ್‌ಗೆ 5 ಲಕ್ಷ ಹಣ ಕಳುಹಿಸಿದ್ದ ಎನ್ನಲಾಗಿದೆ. ಈ ಪೈಕಿ ಖರ್ಚು ಮಾಡಿದ ಹಣವನ್ನು ಹೊರತುಪಡಿಸಿ ಉಳಿದ 4,13,000 ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣಗಳಲ್ಲಿ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆಗಳಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
