ಕಾಪು: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ; ಪ್ರಯಾಣಿಕರು ಪಾರು
ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡರೂ, ಸಮಯಪ್ರಜ್ಞೆ ಮೆರೆದು ಬಸ್ಸನ್ನು ರಸ್ತೆಬದಿಗೆ ಚಲಾಯಿಸುವ ಮೂಲಕ ಸಂಭವಿಸಬಹುದಾಗಿದ್ದ ಭಾರಿ ಅಪಘಾತವನ್ನು ತಪ್ಪಿಸಿದ ಘಟನೆ ಗುರುವಾರ ಮುಳೂರಿನಲ್ಲಿ ನಡೆದಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ‘ವಿಜಯಲಕ್ಷ್ಮಿ ಎಕ್ಸ್‌ಪ್ರೆಸ್’ ಬಸ್ ಮುಳೂರು ತಲುಪಿದಾಗ ಚಾಲಕನಿಗೆ ದಿಢೀರ್ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದೆ. ಇದರಿಂದ ಬಸ್ ನಿಯಂತ್ರಣ ತಪ್ಪಿ ಎಡಭಾಗಕ್ಕೆ ಚಲಿಸಿದೆ. ಈ ಸಂದರ್ಭದಲ್ಲಿಯೂ ಚಾಲಕ ತಕ್ಷಣವೇ ಎಚ್ಚೆತ್ತುಕೊಂಡು ಬಸ್ಸನ್ನು ರಸ್ತೆಬದಿಗೆ ತಿರುಗಿಸಿದ್ದಾರೆ.
ಈ ವೇಳೆ ಬಸ್ ರಸ್ತೆಬದಿಯಲ್ಲಿದ್ದ ಸಣ್ಣ ಮರಕ್ಕೆ ಢಿಕ್ಕಿ ಹೊಡೆದಿದ್ದು, ಬಳಿಕ ಮುಂದೆ ಸಾಗಿ ದೊಡ್ಡ ಮರಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಬಸ್ ಹತ್ತಿರದಲ್ಲೇ ಇದ್ದ ಎರಡು ವಿದ್ಯುತ್ ಕಂಬಗಳಿಗೆ ಢಿಕ್ಕಿ ಹೊಡೆಯುವ ಸಾಧ್ಯತೆಯೂ ಇತ್ತು. ಒಂದು ವೇಳೆ ವಿದ್ಯುತ್ ಕಂಬಗಳಿಗೆ ಢಿಕ್ಕಿ ಹೊಡೆದಿದ್ದರೆ, ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಅಪಾಯ ಎದುರಾಗುವ ಸಾಧ್ಯತೆಯಿತ್ತು.
ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಚಾಲಕನಿಗೆ ದಿಢೀರ್ ಅನಾರೋಗ್ಯ ಉಂಟಾದರೂ, ಆ ಕ್ಷಣದಲ್ಲೇ ತೋರಿದ ಸಮಯಪ್ರಜ್ಞೆ ಹಾಗೂ ತಕ್ಷಣದ ನಿರ್ಧಾರದಿಂದ ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ತಪ್ಪಿದಂತಾಗಿದೆ. ಚಾಲಕನ ಸಮಯೋಚಿತ ಕ್ರಮದಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.