ರಶ್ಮಿ ಸಾಮಂತ್ ನೇತೃತ್ವದಲ್ಲಿ ಯುವ ಮಹಿಳಾ ಶಕ್ತಿಯ ಸಂಘಟನೆಗೆ ನಾಂದಿಯಾಗಲಿ: ಕುತ್ಯಾರು ನವೀನ್ ಶೆಟ್ಟಿ
ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ ನೇಮಕಗೊಂಡಿರುವ ಯುವ ಚಿಂತಕಿ ಹಾಗೂ ಲೇಖಕಿ ರಶ್ಮಿ ಸಾಮಂತ್ ಮಣಿಪಾಲ ಅವರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಯುವ ಮಹಿಳಾ ಶಕ್ತಿಯ ಕ್ರೋಡೀಕರಣವಾಗಲಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಶಿಸಿದರು.
ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ ನೇಮಕಗೊಂಡ ಬಳಿಕ ಬಿಜೆಪಿ ಜಿಲ್ಲಾ ಕಚೇರಿಗೆ ಭೇಟಿ ನೀಡಿದ ರಶ್ಮಿ ಸಾಮಂತ್ ಅವರನ್ನು ಜಿಲ್ಲಾ ಬಿಜೆಪಿಯ ವತಿಯಿಂದ ಶಾಲು ಹೊದಿಸಿ ಗೌರವಿಸಿ, ಅಭಿನಂದಿಸಿ ಅವರು ಮಾತನಾಡಿದರು.
ರಶ್ಮಿ ಸಾಮಂತ್ ಅವರ ಮೂಲಕ ಉಡುಪಿ ಜಿಲ್ಲೆಗೆ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ನಾಯಕತ್ವ ದೊರೆತಿರುವುದು ಹೆಮ್ಮೆಯ ಸಂಗತಿ. ಜಿಲ್ಲೆಯಲ್ಲಿ ಯುವ ಶಕ್ತಿಯನ್ನು ಸಂಘಟಿಸಲು ಇದರಿಂದ ಹೆಚ್ಚಿನ ಬಲ ದೊರೆತಂತಾಗಿದೆ. ವಿಚಾರ, ಚಟುವಟಿಕೆ ಹಾಗೂ ದೂರದೃಷ್ಟಿಯ ಚಿಂತನೆಯೊಂದಿಗೆ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಬಿಜೆಪಿಯ ವಿಶೇಷತೆಯಾಗಿದೆ. ರಶ್ಮಿ ಸಾಮಂತ್ ಅವರ ನೇತೃತ್ವದಲ್ಲಿ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಿ, ಯುವ ಮೋರ್ಚಾ ಹೊಸ ಸ್ಫೂರ್ತಿಯೊಂದಿಗೆ ಪಕ್ಷ ಸಂಘಟನೆಗೆ ಮತ್ತಷ್ಟು ಶಕ್ತಿ ತುಂಬುವಂತಾಗಲಿ ಎಂದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮಾತನಾಡಿ, ಉಡುಪಿ ಮೂಲದ ರಶ್ಮಿ ಸಾಮಂತ್ ಅವರು ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ ಆಯ್ಕೆಯಾಗಿರುವುದು ಸಂತಸದ ವಿಚಾರ. ಭವಿಷ್ಯದಲ್ಲಿ ಯುವತಿಯರು ಯುವ ಮೋರ್ಚಾದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಂಘಟಿತ ಪ್ರಯತ್ನ ನಡೆಸುವ ಜತೆಗೆ ಸದೃಢ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಶ್ಮಿ ಸಾಮಂತ್, ಸಂಘಟನೆ ಹಾಗೂ ಸಂಘದ ಕಾರ್ಯಚಟುವಟಿಕೆಗಳ ದೃಷ್ಟಿಯಿಂದ ಉಡುಪಿ ಐತಿಹಾಸಿಕ ಕ್ಷೇತ್ರವಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶ ಭಾರತ. ದೇಶ ಮೊದಲು ಎಂಬ ಚಿಂತನೆಯೊಂದಿಗೆ ರಾಷ್ಟ್ರ ನಿರ್ಮಾಣದಲ್ಲಿ ಯುವಕ-ಯುವತಿಯರ ಪಾತ್ರ ಮಹತ್ವದ್ದಾಗಿದೆ. ಬಿಜೆಪಿ ಯುವ ಮೋರ್ಚಾದಲ್ಲಿ ಯುವತಿಯರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸುವುದರ ಜತೆಗೆ ಯುವಶಕ್ತಿಯ ಮೂಲಕ ಪಕ್ಷ ಸಂಘಟನೆಗೆ ಅಮೂಲ್ಯ ಕೊಡುಗೆ ನೀಡೋಣ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ್ ನಾಯಕ್, ಉಡುಪಿ ನಗರಾಧ್ಯಕ್ಷ ದಿನೇಶ್ ಅಮಿನ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿಗಳಾದ ಗಿರೀಶ್ ಎಂ. ಅಂಚನ್, ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಕುಂದರ್, ಅಭಿರಾಜ್ ಸುವರ್ಣ, ಬಿಜೆಪಿ ಉಡುಪಿ ನಗರ ಉಪಾಧ್ಯಕ್ಷ ಕಿಶೋರ್ ಕುಮಾರ್ ಕರಂಬಳ್ಳಿ, ಕಾರ್ಯದರ್ಶಿ ಗುರುರಾಜ್ ಭಂಡಾರಿ, ಉಡುಪಿ ನಗರ ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ನಿತಿನ್ ಪೈ ಸೇರಿದಂತೆ ಯುವ ಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
