-->
 ಉಡುಪಿಯಲ್ಲಿ'ಕೆಮ್ತೂರು ನಾಟಕ ಪ್ರಶಸ್ತಿ'ಗಾಗಿ 25ನೇ ವರ್ಷದ ತುಳು ನಾಟಕ ಸ್ಪರ್ಧೆ

ಉಡುಪಿಯಲ್ಲಿ'ಕೆಮ್ತೂರು ನಾಟಕ ಪ್ರಶಸ್ತಿ'ಗಾಗಿ 25ನೇ ವರ್ಷದ ತುಳು ನಾಟಕ ಸ್ಪರ್ಧೆ


ತುಳು ರಂಗಭೂಮಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ ದಿವಂಗತ ಕೆಮ್ತೂರು ದೊಡ್ಡಣ್ಣ ಶೆಟ್ಟಿಯವರ ಸ್ಮರಣಾರ್ಥ ತುಳುಕೂಟ ಉಡುಪಿ (ರಿ.) ವತಿಯಿಂದ ಆಯೋಜಿಸಲಾಗುತ್ತಿರುವ 25ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯು 2027ರ  ಜನವರಿ ಮೊದಲ ವಾರದಿಂದ ಉಡುಪಿಯಲ್ಲಿ ನಡೆಯಲಿದೆ.

ತುಳು ರಂಗಭೂಮಿಯನ್ನು ಜೀವಂತವಾಗಿರಿಸುವುದರ ಜತೆಗೆ ಸೃಜನಶೀಲ ಹಾಗೂ ಆಧುನಿಕ ರಂಗಪ್ರಜ್ಞೆಯ ಪ್ರಯೋಗಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ತುಳು ರಂಗಭೂಮಿಯನ್ನು ಇತರ ಭಾಷೆಗಳ ರಂಗಭೂಮಿಗಳಿಗೆ ಸರಿಸಮನಾಗಿ ಬೆಳೆಸುವುದು ಈ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ. ದೇಶದ ಯಾವುದೇ ಭಾಗದ ಅರ್ಹ ತುಳು ಹವ್ಯಾಸಿ ನಾಟಕ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಗೆ ಗರಿಷ್ಠ ಏಳು ನಾಟಕಗಳನ್ನು ಆಯ್ಕೆ ಮಾಡಲಾಗುವುದು.

ಸ್ಪರ್ಧೆಯಲ್ಲಿ ವಿಜೇತರಾಗುವ ತಂಡಗಳಿಗೆ ಪ್ರಥಮ ಬಹುಮಾನವಾಗಿ 30,000 ರೂ., ದ್ವಿತೀಯ ಬಹುಮಾನವಾಗಿ 25,000 ರೂ. ಹಾಗೂ ತೃತೀಯ ಬಹುಮಾನವಾಗಿ 20,000 ರೂ. ನಗದು ಬಹುಮಾನ ನೀಡಲಾಗುವುದು.

ನಿರ್ದೇಶನ ವಿಭಾಗದಲ್ಲಿ ಪ್ರಥಮ 3,000 ರೂ., ದ್ವಿತೀಯ 2,500 ರೂ. ಹಾಗೂ ತೃತೀಯ 2,000 ರೂ. ಬಹುಮಾನ ನೀಡಲಾಗುತ್ತದೆ. ಸಂಗೀತ, ರಂಗವಿನ್ಯಾಸ, ಬೆಳಕು, ನಟ ಹಾಗೂ ನಟಿ ವಿಭಾಗಗಳಲ್ಲಿ ಪ್ರಥಮ ಬಹುಮಾನ 1,500 ರೂ., ದ್ವಿತೀಯ 1,250 ರೂ. ಹಾಗೂ ತೃತೀಯ 1,000 ರೂ. ನಿಗದಿಪಡಿಸಲಾಗಿದೆ. ಬಾಲನಟ ಮತ್ತು ಬಾಲನಟಿ ವಿಭಾಗಗಳಲ್ಲಿ ತಲಾ 1,000 ರೂ. ಬಹುಮಾನ ನೀಡಲಾಗುವುದು. ಶ್ರೇಷ್ಠ ತುಳು ಅನುವಾದ ನಾಟಕಕ್ಕೆ 2,000 ರೂ. ಬಹುಮಾನ ದೊರೆಯಲಿದೆ.

ಸ್ಪರ್ಧೆಗೆ ಆಯ್ಕೆಯಾದ ಜಿಲ್ಲೆಯೊಳಗಿನ ತಂಡಗಳಿಗೆ 10,000 ರೂ., ಹೊರಜಿಲ್ಲೆಯ ತಂಡಗಳಿಗೆ 15,000 ರೂ. ಹಾಗೂ ರಾಜ್ಯದ ಹೊರಗಿನ ತಂಡಗಳಿಗೆ 20,000 ರೂ. ಭತ್ಯೆ ನೀಡಲಾಗುವುದು. ಜತೆಗೆ ಊಟೋಪಚಾರ ಮತ್ತು ಉತ್ತಮ ವಸತಿ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ತುಳುಕೂಟ ಉಡುಪಿ (ರಿ.) ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿಯಿರುವ ಕ್ರಿಯಾಶೀಲ ತುಳು ಹವ್ಯಾಸಿ ನಾಟಕ ತಂಡಗಳು ಮುದ್ರಿತ ಪ್ರವೇಶಪತ್ರ ಹಾಗೂ ಸ್ಪರ್ಧೆಯ ನಿಯಮಾವಳಿಗಳಿಗಾಗಿ ಬಿ. ಪ್ರಭಾಕರ ಭಂಡಾರಿ, 'ಪ್ರಕೃತಿ', 5-94, 76ನೇ ಬಡಗುಬೆಟ್ಟು, ಬೈಲೂರು, ಉಡುಪಿ–576101 ಇವರನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9880825626 ಅನ್ನು ಸಂಪರ್ಕಿಸಬಹುದು. ಪ್ರವೇಶಪತ್ರಗಳನ್ನು ಸಲ್ಲಿಸಲು ನವೆಂಬರ್ 9, 2026 ಕೊನೆಯ ದಿನಾಂಕವಾಗಿದೆ.


Ads on article

Advertise in articles 1

advertising articles 2

Advertise under the article