-->
ಉಡುಪಿಯಲ್ಲಿ 45 ಸಾವಿರಕ್ಕೂ ಅಧಿಕ ಮಕ್ಕಳಿಗೆ ನೇತ್ರ ತಪಾಸಣೆಗೆ ಸಾಂಕೇತಿಕ ಚಾಲನೆ

ಉಡುಪಿಯಲ್ಲಿ 45 ಸಾವಿರಕ್ಕೂ ಅಧಿಕ ಮಕ್ಕಳಿಗೆ ನೇತ್ರ ತಪಾಸಣೆಗೆ ಸಾಂಕೇತಿಕ ಚಾಲನೆ


ಉಡುಪಿ ಜಿಲ್ಲೆಯ 1,900 ಅಂಗನವಾಡಿಗಳಲ್ಲಿ ಆರು ವರ್ಷದೊಳಗಿನ 45 ಸಾವಿರಕ್ಕೂ ಅಧಿಕ ಮಕ್ಕಳಿಗೆ ನೇತ್ರ ತಪಾಸಣೆ ನಡೆಸುವ ಬೃಹತ್ ನಿರಂತರ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.


ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ರಾಜೀವ್ ಕೋಟ್ಯಾನ್, ಉಪ ಗವರ್ನರ್ ಹರಿಪ್ರಸಾದ್ ರೈ ಹಾಗೂ ಮಾಜಿ ಗವರ್ನರ್ ಸಪ್ನಾ ಸುರೇಶ್ ಉಪಸ್ಥಿತರಿದ್ದರು.


ಕಾರ್ಯಕ್ರಮದ ಸಂಯೋಜಕ ಡಾ. ಎಚ್. ಗಣೇಶ್ ಪೈ ಅವರು ಯೋಜನೆಯ ಉದ್ದೇಶವನ್ನು ವಿವರಿಸಿ, ಅತಿಥಿಗಳನ್ನು ಪರಿಚಯಿಸಿದರು. ರಾಷ್ಟ್ರೀಯ ಬಾಲ ಆರೋಗ್ಯ ಕಾರ್ಯಕ್ರಮದ ಡಾ. ಲತಾ ನಾಯಕ್ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಕಾರ್ಯಕ್ರಮದ ಮಹತ್ವದ ಕುರಿತು ಮಾತನಾಡಿದರು.

ಸರಳೇಬೆಟ್ಟು ಅಂಗನವಾಡಿಯಲ್ಲಿ ನಡೆಸಿದ ಪ್ರಾಥಮಿಕ ತಪಾಸಣೆಯಲ್ಲಿ ಏಳು ಮಕ್ಕಳಿಗೆ ಕಣ್ಣಿನ ಸಮಸ್ಯೆ ಇರುವುದು ಪತ್ತೆಯಾಗಿದ್ದು, ಅವರಿಗೆ ತುರ್ತಾಗಿ ಕನ್ನಡಕದ ಅಗತ್ಯವಿರುವುದನ್ನು ಗುರುತಿಸಲಾಗಿದೆ. ಈ ಮಕ್ಕಳಿಗೆ ಲಯನ್ಸ್ ಕ್ಲಬ್ ಮಣಿಪಾಲದ ವತಿಯಿಂದ ಉಚಿತವಾಗಿ ಕನ್ನಡಕ ವಿತರಿಸಲಾಗುವುದು.

ಲಯನ್ಸ್ ಕ್ಲಬ್ ಮಣಿಪಾಲವು ಮಣಿಪಾಲದ ಮಂಜುನಾಥ ನೇತ್ರ ಆಸ್ಪತ್ರೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಡಾ. ಶಕೀಲಾ ಹಾಗೂ ಡಾ. ಸಚಿನ್ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಕಣ್ಣಿನ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಒದಗಿಸುವ ಮೂಲಕ ಅವರ ದೃಷ್ಟಿಯ ಆರೋಗ್ಯವನ್ನು ಕಾಪಾಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

Ads on article

Advertise in articles 1

advertising articles 2

Advertise under the article