ಬಂಕೇರಕಟ್ಟದಲ್ಲಿ 5 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ
ಉಡುಪಿಯ ಉದ್ಯಾವರದಿಂದ ಮಲ್ಪೆಯನ್ನು ಸಂಪರ್ಕಿಸುವ ಕಲ್ಮಾಡಿ–ಕಿದಿಯೂರು ಮುಖ್ಯ ರಸ್ತೆಯ ಬಂಕೇರಕಟ್ಟದಲ್ಲಿ 5 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಯಶ್ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಬಂಕೇರಕಟ್ಟ ಸೇತುವೆ ಪ್ರತಿವರ್ಷ ಮಳೆಗಾಲದಲ್ಲಿ ಜಲಾವೃತಗೊಂಡು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಹಳೆಯ ಸೇತುವೆ ಶಿಥಿಲಾವಸ್ಥೆಯಲ್ಲಿದೆ. ಸ್ಥಳೀಯರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಲೋಕೋಪಯೋಗಿ ಇಲಾಖೆಯ ಮೂಲಕ 5 ಕೋಟಿ ವೆಚ್ಚದಲ್ಲಿ 10 ಮೀಟರ್ ಅಗಲದ ನೂತನ ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ವೈಜ್ಞಾನಿಕ ಮಾದರಿಯಲ್ಲಿ ಸೇತುವೆ ನಿರ್ಮಾಣವಾಗಲಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಕಳೆದ ವರ್ಷ 4 ಕೋಟಿ ವೆಚ್ಚದಲ್ಲಿ ಕಲ್ಮಾಡಿಯಿಂದ ಸಂಪಿಗೆ ನಗರದವರೆಗೆ ಫೇವರ್ ಫಿನಿಷ್ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ನೂತನ ಸೇತುವೆ ನಿರ್ಮಾಣ ಪೂರ್ಣಗೊಂಡ ಬಳಿಕ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ ಮಾತನಾಡಿ, ಮಲ್ಪೆ ಬಂದರಿಗೆ ಆಗಮಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯವಾಗಿ ಬಳಸುವ ಪ್ರಮುಖ ರಸ್ತೆಯಿದು. ನೂತನ ಸೇತುವೆ ನಿರ್ಮಾಣದಿಂದ ವಾಹನ ಸಂಚಾರ ಸುಗಮವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮೀನುಗಾರ ಮುಖಂಡರಾದ ದಯಾನಂದ ಸುವರ್ಣ, ರಾಮಚಂದ್ರ ಕುಂದರ್, ರತ್ನಾಕರ ಸಾಲ್ಯಾನ್, ದಯಾಕರ ಸುವರ್ಣ, ಜಗನ್ನಾಥ ಕಡೆಕಾರು, ಸ್ಥಳೀಯ ನಿಕಟಪೂರ್ವ ನಗರಸಭಾ ಸದಸ್ಯ ಸುಂದರ ಕಲ್ಮಾಡಿ, ಅಂಬಲಪಾಡಿ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಸದಸ್ಯರಾದ ಶಶಿಧರ ಸುವರ್ಣ, ರಾಜೇಶ್ ಸುವರ್ಣ, ಭಾರತಿ ಭಾಸ್ಕರ್, ಸುಂದರ ಪೂಜಾರಿ, ಪ್ರಮೋದ್ ಸಾಲ್ಯಾನ್, ಸುಜಾತ ಶೆಟ್ಟಿ, ಉಷಾ ಶೆಟ್ಟಿ, ಸೋಮನಾಥ ಬಿ.ಕೆ., ಪ್ರವೀಣ್ ಕುಮಾರ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ವಿನಯ್ ಕಲ್ಮಾಡಿ, ರಾಜೇಂದ್ರ ಪಂದುಬೆಟ್ಟು, ರಾಮರಾಜ್ ಕಿದಿಯೂರು, ಜಗದೀಶ್ ಆಚಾರ್ಯ, ಲಕ್ಷ್ಮೀಶ ಬಂಗೇರ, ದಯಾಶಿನಿ, ಮಾಜಿ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ವಿಜಯ ಕೊಡವೂರು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

