ಉಡುಪಿಯಲ್ಲಿ ‘ನಡಿಗೆ’ ಪಾದರಕ್ಷೆ ಸಂಗ್ರಹ ಅಭಿಯಾನ: ಮೊದಲ ದಿನವೇ 6 ಸಾವಿರ ಜೊತೆ ಸಂಗ್ರಹ
ಬಳಸಿದ ಪಾದರಕ್ಷೆಗಳನ್ನು ಸಂಗ್ರಹಿಸಿ, ನವೀಕರಿಸುವ ಮೂಲಕ ಅಗತ್ಯವುಳ್ಳ ಮಕ್ಕಳಿಗೆ ಉಚಿತವಾಗಿ ವಿತರಿಸುವ ಉದ್ದೇಶದಿಂದ ಆಯೋಜಿಸಿರುವ ಮೂರು ದಿನಗಳ ‘ನಡಿಗೆ’ ಪಾದರಕ್ಷೆ ಸಂಗ್ರಹ ಅಭಿಯಾನಕ್ಕೆ ಶುಕ್ರವಾರ ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಲಾಯಿತು.
ಉಡುಪಿಯ ಶೋಕ ಮಾತಾ ಇಗರ್ಜಿಯ ಧರ್ಮಗುರು ರೆ. ಫಾ. ಡೆನಿಸ್ ಡೆ’ಸಾ ಮತ್ತು ಸಾಂಸ್ಕೃತಿಕ ಸಂಘಟಕ ವಿಶ್ವನಾಥ ಶೆಣೈ ಅವರು ಗಿಡ ನೆಡುವ ಮೂಲಕ ಅಭಿಯಾನವನ್ನು ಉದ್ಘಾಟಿಸಿದರು.
ಅಭಿಯಾನದ ಮೊದಲ ದಿನ ಉಡುಪಿಯಲ್ಲಿ ಸುಮಾರು 6,000 ಜೊತೆ ಪಾದರಕ್ಷೆಗಳು ಸಂಗ್ರಹವಾಗಿವೆ. ಮೂರು ದಿನಗಳ ಅವಧಿಯಲ್ಲಿ 20,000ಕ್ಕೂ ಅಧಿಕ ಜೊತೆ ಪಾದರಕ್ಷೆಗಳನ್ನು ಸಂಗ್ರಹಿಸುವ ನಿರೀಕ್ಷೆಯನ್ನು ಆಯೋಜಕರು ಹೊಂದಿದ್ದಾರೆ.
ಬಳಸಿದ ಪಾದರಕ್ಷೆಗಳನ್ನು ಮರುಬಳಕೆಗೆ ಸಿದ್ಧಪಡಿಸುವ ಮುಂಬೈ ಮೂಲದ ‘ಗ್ರೀನ್ಸೋಲ್’ ಸಂಸ್ಥೆಯ ಸಹಸ್ಥಾಪಕ ಶ್ರೇಯಾನ್ಸ್ ಭಂಡಾರಿ ಮಾತನಾಡಿ, ಕಳೆದ 10 ವರ್ಷಗಳಿಂದ ಈ ಉಪಕ್ರಮದ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಲಾಗುತ್ತಿದೆ. ಇದು ಕೇವಲ ಪಾದರಕ್ಷೆಗಳ ಸಂಗ್ರಹ ಅಭಿಯಾನವಲ್ಲ. ಸಂಗ್ರಹಿಸಿದ ಪಾದರಕ್ಷೆಗಳನ್ನು ನವೀಕರಿಸಿ, ಸ್ವಯಂಸೇವಕರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿರುವ ಅಗತ್ಯವುಳ್ಳ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜನತಾ ಗ್ರೂಪ್ನ ನಿರ್ದೇಶಕ ರಕ್ಷಿತ್ ಕುಂದರ್, ಮಣಿಪಾಲದ ಎಚ್ಪಿಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ನ ಅಧ್ಯಕ್ಷ ಹರಿಪ್ರಸಾದ್ ರೈ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ. ಗಾಯತ್ರಿ ಪೈ, ಉಪಪ್ರಾಂಶುಪಾಲ ಡಾ. ಎಂ. ವಿಶ್ವನಾಥ ಪೈ ಅಭಿಯಾನಕ್ಕೆ ಶುಭ ಹಾರೈಸಿದರು. ಅಭಿಯಾನದ ಸಂಘಟಕ ಅವಿನಾಶ್ ಕಾಮತ್ ಉಪಸ್ಥಿತರಿದ್ದರು.
ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಸುಜಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.