ಕೆಪಿಐ ಮೌಲ್ಯಮಾಪನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಗೆ ರಾಜ್ಯದಲ್ಲಿ 7ನೇ ಸ್ಥಾನ
ರಾಜ್ಯ ಪೊಲೀಸ್ ಇಲಾಖೆಯು ಕೀ ಪರ್ಫಾರ್ಮೆನ್ಸ್ ಇಂಡಿಕೇಟರ್ (ಕೆಪಿಐ) ಮಾನದಂಡಗಳ ಆಧಾರದಲ್ಲಿ ಪ್ರಕಟಿಸಿರುವ 2016ರ ಜನವರಿ 1ರಿಂದ ಈವರೆಗಿನ ಹತ್ತು ವರ್ಷಗಳ ಸಮಗ್ರ ಸಾಧನಾ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣೆ ರಾಜ್ಯದ ಟಾಪ್ 10 ಪೊಲೀಸ್ ಠಾಣೆಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಒಟ್ಟು 100 ಅಂಕಗಳ ಮೌಲ್ಯಮಾಪನದಲ್ಲಿ 67.22 ಅಂಕಗಳನ್ನು ಗಳಿಸಿರುವ ಗಂಗೊಳ್ಳಿ ಠಾಣೆ ರಾಜ್ಯಮಟ್ಟದಲ್ಲಿ 7ನೇ ಸ್ಥಾನ ಅಲಂಕರಿಸಿದೆ.
ಅಪರಾಧ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸೇರಿದಂತೆ ಪೊಲೀಸ್ ಠಾಣೆಗಳ ಕಾರ್ಯಕ್ಷಮತೆಯನ್ನು ಸಮಗ್ರವಾಗಿ ಅಳೆಯಲು ರಾಜ್ಯ ಪೊಲೀಸ್ ಇಲಾಖೆ 14 ಪ್ರಮುಖ ಮಾನದಂಡಗಳನ್ನು ಒಳಗೊಂಡ ಕೆಪಿಐ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅಪರಾಧ ಕಡಿತ, ಚಾರ್ಜ್ಶೀಟ್ ಸಲ್ಲಿಕೆ, ಬೀಟ್ ವ್ಯವಸ್ಥೆಯ ಕಾರ್ಯಕ್ಷಮತೆ, ಎಫ್ಐಆರ್ಗಳ ದಾಖಲಾತಿ, ದೂರುಗಳ ವಿಲೇವಾರಿ, ಕಾಣೆಯಾದವರ ಪತ್ತೆ, ಪ್ರಕರಣಗಳ ವಿಲೇವಾರಿ, ಅರ್ಜಿಗಳ ವಿಲೇವಾರಿ, ಪತ್ತೆಯಾದ ಆಸ್ತಿಯ ಮೌಲ್ಯ ಹಾಗೂ ವಿಲೇವಾರಿ, ಎಸ್ಎಲ್ಎಲ್. ಪ್ರಕರಣಗಳು ಮತ್ತು ಪರಿಶೀಲನೆ ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ ಅಂಕಗಳನ್ನು ನಿಗದಿಪಡಿಸಲಾಗಿದೆ.
ಈ ಕಠಿಣ ಮೌಲ್ಯಮಾಪನದಲ್ಲಿ ರಾಯಚೂರು ಜಿಲ್ಲೆಯ ಯಪಲದಿನ್ನಿ ಪೊಲೀಸ್ ಠಾಣೆ 69.45 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ಮೈಸೂರು ಜಿಲ್ಲೆಯ ನಂಜನಗೂಡು ಗ್ರಾಮಾಂತರ ಠಾಣೆ 68.10 ಅಂಕಗಳೊಂದಿಗೆ ದ್ವಿತೀಯ ಹಾಗೂ ಗದಗ ಜಿಲ್ಲೆಯ ನರೇಗಲ್ ಠಾಣೆ 67.83 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿವೆ.
ಇನ್ನು ಶಕ್ತಿ ನಗರ ಠಾಣೆ 67.68, ಬೀದರ್ ಜಿಲ್ಲೆಯ ಹುಲಸೂರು ಠಾಣೆ 67.42, ಗದಗ ಜಿಲ್ಲೆಯ ಮುಳಗುಂದ ಠಾಣೆ 67.22 ಅಂಕಗಳನ್ನು ಪಡೆದಿವೆ. ಗಂಗೊಳ್ಳಿ ಪೊಲೀಸ್ ಠಾಣೆ 67.22 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದು, ರಾಯಚೂರು ಜಿಲ್ಲೆಯ ಇಡಪನೂರು ಠಾಣೆ 66.89 ಹಾಗೂ ಗದಗ ಟೌನ್ ಠಾಣೆ 66.67 ಅಂಕಗಳೊಂದಿಗೆ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಗಂಗೊಳ್ಳಿ ಪೊಲೀಸ್ ಠಾಣೆಯ ಈ ಸಾಧನೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಶಕದ ಅವಧಿಯ ಸಮಗ್ರ ಮೌಲ್ಯಮಾಪನದಲ್ಲಿ ರಾಜ್ಯಮಟ್ಟದ ಗುರುತಿಸುವಿಕೆ ದೊರೆತಿರುವುದು ಠಾಣೆಯ ಸಿಬ್ಬಂದಿಯ ಕರ್ತವ್ಯನಿಷ್ಠೆ ಮತ್ತು ಕಾರ್ಯದಕ್ಷತೆಗೆ ಸಂದ ಗೌರವವಾಗಿದೆ.