‘ವಾಯ್ಸ್ ಆಫ್ ಉಡುಪಿ’ ಕರೋಕೆ ಗೀತಗಾಯನ ಸ್ಪರ್ಧೆ: ಮಂಗಳೂರಿನ ಅನನ್ಯ ನಾರಾಯಣ್ಗೆ ಪ್ರಥಮ ಬಹುಮಾನ
Thursday, October 15, 2026
ಶ್ರೀ ಮೂಕಾಂಬಿಕ ಕಲಾ ತಂಡ, ಪೊಲೀಸ್ ಲೈನ್ ಉಡುಪಿ ಹಾಗೂ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ನಿಯಮಿತ, ಪೆರ್ಡೂರು ಇವರ ಸಹಭಾಗಿತ್ವದಲ್ಲಿ, ತುಷಾರ ಶಂಕರ ಅವರ ಸಾರಥ್ಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಲಾದ ರಾಜ್ಯಮಟ್ಟದ ‘ವಾಯ್ಸ್ ಆಫ್ ಉಡುಪಿ’ ಸೀಸನ್-1 ಕರೋಕೆ ಗೀತಗಾಯನ ಸ್ಪರ್ಧೆಯಲ್ಲಿ ಮಂಗಳೂರಿನ ಅನನ್ಯ ನಾರಾಯಣ್ ಪ್ರಥಮ ಸ್ಥಾನ ಪಡೆದುಕೊಂಡರು.
ಪೂರ್ವಿ ಶೆಟ್ಟಿ ದ್ವಿತೀಯ, ಕಾರ್ಕಳದ ಹನಿವೆಣ್ಯ ತೃತೀಯ, ಹೆಬ್ರಿಯ ರಾಜೇಶ್ ಪ್ರಭು ನಾಲ್ಕನೇ ಹಾಗೂ ಟಿ. ಶಂಕರ್ ಐದನೇ ಬಹುಮಾನ ಗಳಿಸಿದರು.
ಅ. 14ರಂದು ಸಂಜೆ ಉಡುಪಿಯ ಮಿಷನ್ ಕಂಪೌಂಡ್ ಬಳಿಯ ಪೊಲೀಸ್ ವಸತಿ ಗೃಹದ ಆವರಣದಲ್ಲಿರುವ ಮೂಕಾಂಬಿಕಾ ಭಜನಾ ಮಂದಿರದ ವಠಾರದಲ್ಲಿ ಸ್ಪರ್ಧೆಯ ಅಂತಿಮ ಸುತ್ತು ನಡೆಯಿತು. ಮೊದಲ ಸುತ್ತಿನಲ್ಲಿ ಆಯ್ಕೆಯಾದ 16 ಸ್ಪರ್ಧಿಗಳು ಅಂತಿಮ ಸುತ್ತಿನಲ್ಲಿ ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಿದರು. ತೇಜಸ್ವಿನಿ ಅನಿಲ್ ಕುಮಾರ್ ಹಾಗೂ ಜಯರಾಮ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸಭಾ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಸುವರ್ಣ ಆರ್ಯಭಟ ಪ್ರಶಸ್ತಿ ಪುರಸ್ಕೃತ ಸ್ಯಾಕ್ಸೋಫೋನ್ ಕಲಾವಿದೆ ಭಾರತಿ ಗೋಪಾಲ್ ಮಾತನಾಡಿ, ಕಲಾವಿದರಿಗೆ ಸೂಕ್ತ ವೇದಿಕೆ ದೊರೆಯಲು ಸಾಕಷ್ಟು ಶ್ರಮಪಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಕಲ್ಪಿಸುವ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ಮಣಿಪಾಲ್ ವ್ಯಾಲಿವೀವ್ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಾಧನ ಮಲ್ಯ ಮಾತನಾಡಿ, ಕರೋಕೆ ಸಂಗೀತದ ಮೂಲಕ ಅನೇಕ ಕಲಾವಿದರಿಗೆ ಲಯಬದ್ಧವಾಗಿ ಹಾಡಲು ಅವಕಾಶ ದೊರೆತಿದೆ. ಇಂತಹ ಸ್ಪರ್ಧಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವ ಮೂಲಕ ಇನ್ನಷ್ಟು ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಆಶಿಸಿದರು.
ಮೂಕಾಂಬಿಕಾ ದೇವಿಯ ಅರ್ಚಕ ಹರೀಶ್ ಕೊಡಂಚ, ಸಮಾಜಸೇವಕ ನಿತ್ಯಾನಂದ ಒಳಕಾಡು ಹಾಗೂ ಪಿಡಬ್ಲ್ಯೂಡಿ ಗುತ್ತಿಗೆದಾರ ಬಾಲರಾಜ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಉಡುಪಿ ಸೆನ್ ಠಾಣೆಯ ಇನ್ಸ್ಪೆಕ್ಟರ್ ನೀಲೇಶ್ ಚೌಹಾಣ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗಾಯಕ ಹಾಗೂ ಜಾನಪದ ಕಲಾವಿದ ಡಾ. ಸಚಿನ್ ಸಾಲ್ಯಾನ್, ಸಮಾಜಸೇವಕ ನಿತ್ಯಾನಂದ ಒಳಕಾಡು ಮತ್ತು ಅಂತರಾಷ್ಟ್ರೀಯ ಸುವರ್ಣ ಆರ್ಯಭಟ ಪ್ರಶಸ್ತಿ ಪುರಸ್ಕೃತ ಸ್ಯಾಕ್ಸೋಫೋನ್ ಕಲಾವಿದೆ ಭಾರತಿ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಯೋಗೀಶ್ ಹಾಗೂ ಕೃತಿ ಮೂಡುಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ತುಷಾರ ಶಂಕರ, ಶಾಂತ ಶಂಕರ್, ಅಮಿತ, ವಿರೇಖಾ ಚಂದ್ರ ಶೆಟ್ಟಿ ಸೇರಿದಂತೆ ಪೊಲೀಸ್ ಲೈನ್ನ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.




