ಸಹಕಾರಿ ಕ್ಷೇತ್ರದ ಜೊತೆಗೆ ಸಮಾಜಸೇವೆಗೆ ಮತ್ತಷ್ಟು ಒತ್ತು: ಸಹಕಾರ ರತ್ನ ಡಾ. ಎಂ.ಎನ್ ರಾಜೇಂದ್ರ ಕುಮಾರ್
ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುಣಮುಖರಾಗಿ ಮಂಗಳೂರಿನ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಮಾತನಾಡಿದ ಡಾ.ಎಂ.ಎನ್ ರಾಜೇಂದ್ರಕುಮಾರ್ ಅವರು, ನಾನು ಬದುಕಿ ಬಂದು ಈ ರೀತಿ ನಿಮ್ಮ ಜೊತೆ ವೇದಿಕೆ ಹಂಚಿಕೊಳ್ಳುತ್ತೇನೆ ಎನ್ನುವ ಗ್ಯಾರಂಟಿ ಇರಲಿಲ್ಲ. ಅನಾರೋಗ್ಯದಿಂದ ಗುಣಮುಖರಾಗಲು ಪ್ರಾರ್ಥಿಸಿದ ಎಲ್ಲಾ ಹಿತೈಷಿಗಳು ಹಾಗೂ ಚಿಕಿತ್ಸೆ ನೀಡಿ ಆರೋಗ್ಯ ಸುಧಾರಣೆಗೆ ಶ್ರಮಿಸಿದ ವೈದ್ಯರು ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಎಲ್ಲರ ಪ್ರೀತಿ, ಆಶೀರ್ವಾದ ಮತ್ತು ಹಾರೈಕೆಯಿಂದ ಮತ್ತೆ ನಿಮ್ಮೆಲ್ಲರೊಂದಿಗೆ ಬೆರೆಯುವಂತಾಗಿದೆ. ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಮಗೆ ಪ್ರೀತಿ, ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಮುಂದೆಯೂ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನವೋದಯವನ್ನು ಇನ್ನಷ್ಟು ಬೆಳೆಸಲು ಶ್ರಮಿಸುವುದಾಗಿ ಹೇಳಿದ ಅವರು, ತಿರುಪತಿಗೆ 1 ಕೋಟಿ ನೀಡುವುದರ ಜೊತೆಗೆ ಜಿಲ್ಲೆಯಲ್ಲಿರುವ ಎಲ್ಲಾ ದೇವಸ್ಥಾನ, ದೈವಸ್ಥಾನಗಳಿಗೆ ತಮ್ಮಿಂದ ಸಾಧ್ಯವಾದ ನೆರವು ನೀಡುವುದಾಗಿ ಘೋಷಿಸಿದರು. ಬಡ ಮಹಿಳೆಯರಿಗೆ ಸಂಕಷ್ಟ ಎದುರಾದಾಗ ನೆರವಾಗುವ ಉದ್ದೇಶದಿಂದ ನವೋದಯದಲ್ಲಿ 1 ಕೋಟಿ ಮೀಸಲಿಡುವುದಾಗಿಯೂ ತಿಳಿಸಿದರು. ಕಾರ್ಕಳದ ಮಹಾಮಸ್ತಕಾಭಿಷೇಕಕ್ಕೆ 50 ಲಕ್ಷ ನೀಡುವುದಾಗಿ ಹೇಳಿದ ಅವರು, ಮುಂದಿನ ದಿನಗಳಲ್ಲಿಯೂ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಾಗಿ ಹೇಳಿದರು.
ಸಹಕಾರಿ ಕ್ಷೇತ್ರದಲ್ಲಿ ಯಾರಿಗಾದರೂ ಅನ್ಯಾಯವಾದರೆ ಅದನ್ನು ಸಹಿಸುವುದಿಲ್ಲ. ಯಾವುದೇ ಪಕ್ಷ ಅಥವಾ ಜಾತಿಯ ಭೇದಭಾವವಿಲ್ಲದೆ, ‘ನಮ್ಮದು ಸಹಕಾರ ಪಕ್ಷ’ ಎಂಬ ಧ್ಯೇಯದೊಂದಿಗೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದಾಗಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಮಾತನಾಡಿ, ಎಂ.ಎನ್ ರಾಜೇಂದ್ರ ಕುಮಾರ್ ಅವರು, ನೂರು ಕಾಲ ಬಾಳಿ ಇನ್ನಷ್ಟು ಸಮಾಜಮುಖಿ ಕೆಲಸ ಕಾರ್ಯ ಮಾಡುವಂತಾಗಬೇಕು ಎಂದರು.
ಉಡುಪಿ ಜಿಲ್ಲಾಡಳಿತವು ದೇವಸ್ಥಾನಗಳಲ್ಲಿ ದೇವರಿಗೆ ಅರ್ಪಿಸಿ ಉಳಿಯುವ ತ್ಯಾಜ್ಯ ಹೂವುಗಳನ್ನು ಸದ್ಬಳಕೆ ಮಾಡಿಕೊಳ್ಳಲು ‘ಉಡುಪಿ ಸುಗಂಧ’ ಹೆಸರಿನ ವಿನೂತನ ಪರಿಸರಸ್ನೇಹಿ ಯೋಜನೆಯನ್ನು ಜಾರಿಗೆ ತಂದಿದ್ದು, ಹೂವುಗಳ ಸಂಗ್ರಹಕ್ಕಾಗಿ ವಾಹನವೊಂದನ್ನು ಡಾ. ಎಂ.ಎನ್ ರಾಜೇಂದ್ರಕುಮಾರ್ ಅವರು ನೀಡಿದ್ದು, ಜಿಲ್ಲಾಧಿಕಾರಿಗಳ ಮೂಲಕ ಕೀ ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಅವರು, ದೇವರ ಮುಡಿಗೇರಿದ ಹೂವು ಕಸಕ್ಕೆ ಸೇರಬಾರದು ಎನ್ನುವ ಉದ್ದೇಶದಿಂದ ಹೂವುಗಳನ್ನು ಸಂಗ್ರಹಿಸಿ, ಅವುಗಳಿಂದ ಪರಿಸರಸ್ನೇಹಿ ಧೂಪದ ಕಡ್ಡಿಗಳು ಹಾಗೂ ಸುಗಂಧ ದ್ರವ್ಯಗಳನ್ನು ತಯಾರಿಸಲಾಗುತ್ತದೆ. ಈಗಾಗಲೇ 30 ಮಹಿಳೆಯರಿಗೆ ತರಬೇತಿ ನೀಡಲಾಗಿದೆ ಎಂದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಬೊಳ್ಳೆಟ್ಟು ಶಶಿಕುಮಾರ್ ರೈ ವಂದಿಸಿದರು. ಪತ್ರಕರ್ತ ಕೆಸಿ ರಾಜೇಶ್ ನಿರೂಪಿಸಿದರು.

.jpeg)