ಮೈಸೂರು ದಸರಾ ವೇಳೆ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಕೃತ್ಯ ಸಾಬೀತು: ನಾಳೆ ಶಿಕ್ಷೆ ಪ್ರಕಟ
Thursday, October 15, 2026
ಮೈಸೂರು ದಸರಾ ಸಂದರ್ಭದಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ 9 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಕಾರ್ತಿಕ್ (32) ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಮೈಸೂರಿನ ಶೀಘ್ರಗತಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಪಿ. ವಘಾಢೆ ಅವರು ಆರೋಪಿಯ ಅಪರಾಧವನ್ನು ಸಾಬೀತಾಗಿದೆ ಎಂದು ಘೋಷಿಸಿದ್ದು, ಅ.16ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ಕಳೆದ ವರ್ಷ ದಸರಾ ಸಮಯದಲ್ಲಿ ಈ ಘಟನೆ ನಡೆದಿತ್ತು. ದಸರಾ ಹಿನ್ನೆಲೆಯಲ್ಲಿ ಬಲೂನ್ ಮಾರಾಟ ಮಾಡಲು ಕಲಬುರಗಿಯಿಂದ ಮೈಸೂರಿಗೆ ಬಂದಿದ್ದ ಕುಟುಂಬವೊಂದು ದಸರಾ ವಸ್ತುಪ್ರದರ್ಶನದ ಸಮೀಪ ಟೆಂಟ್ ಹಾಕಿಕೊಂಡು ವಾಸ್ತವ್ಯ ಹೂಡಿತ್ತು. ರಾತ್ರಿ ವೇಳೆ ಕುಟುಂಬದೊಂದಿಗೆ ಮಲಗಿದ್ದ 9 ವರ್ಷದ ಬಾಲಕಿಯನ್ನು ಆರೋಪಿ ಕಾರ್ತಿಕ್ ಎಳೆದೊಯ್ದು ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ, ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದರು. ಇದೀಗ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಘೋಷಿಸಿದೆ.