-->
ಜಿ.ಪಂ., ತಾ.ಪಂ., ಗ್ರಾ.ಪಂ. ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ: ಕುತ್ಯಾರು ನವೀನ್ ಶೆಟ್ಟಿ ಕರೆ

ಜಿ.ಪಂ., ತಾ.ಪಂ., ಗ್ರಾ.ಪಂ. ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ: ಕುತ್ಯಾರು ನವೀನ್ ಶೆಟ್ಟಿ ಕರೆ


ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳ ಮೀಸಲಾತಿ ಪ್ರಕಟಗೊಂಡಿದ್ದು, ಚುನಾವಣಾ ಅಖಾಡ ಸಿದ್ದಗೊಂಡಿದೆ. ಈಗಾಗಲೇ ಘೋಷಣೆಯಾಗಿರುವ ಮೀಸಲಾತಿಯಡಿ, ಪಕ್ಷದ ಅಭ್ಯರ್ಥಿಗಳನ್ನು ಭರ್ಜರಿ ಬಹುಮತದಿಂದ ಗೆಲ್ಲಿಸುವ ಮೂಲಕ ಮಗದೊಮ್ಮೆ ಜಿ.ಪಂ. ಸಹಿತ ಗರಿಷ್ಠ ತಾ.ಪಂ. ಮತ್ತು ಗ್ರಾ.ಪಂ.ಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಬದ್ಧತೆಯಿಂದ ಶ್ರಮಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂದಿನ 10 ದಿನಗಳಲ್ಲಿ ಎಲ್ಲಾ 28 ಜಿ.ಪಂ. ಕ್ಷೇತ್ರಗಳ ಸಹಿತ ಪ್ರತೀ ಗ್ರಾ.ಪಂ. ವ್ಯಾಪ್ತಿಯ ಕಾರ್ಯಕರ್ತರ ಸಭೆಗಳನ್ನು ಆಯೋಜಿಸಿ ಚುನಾವಣಾ ಪೂರ್ವ ಸಿದ್ಧತೆಗಳನ್ನು ನಡೆಸಬೇಕು. ಸಂಘಟಿತ ಪರಿಶ್ರಮದ ಮೂಲಕ ಗೆಲುವಿನ ರೂವಾರಿಗಳಾಗಿ ಸಾರ್ಥಕ ಸೇವೆ ಸಲ್ಲಿಸಬೇಕು ಎಂದು ಕುತ್ಯಾರು ತಿಳಿಸಿದರು.

ಸೆ.17ರಿಂದ ನಡೆಯುತ್ತಿರುವ 'ಸೇವಾ ಸಂಕಲ್ಪ ಅಭಿಯಾನ'ದ ಸಮಾರೋಪ ಸಮಾರಂಭವು ಅ.17ರಂದು ಕೋಟದ ಕಾರಂತ ಕಲಾ ಭವನದಲ್ಲಿ ನಡೆಯಲಿದೆ. ಅಭಿಯಾನವನ್ನು ಜಿಲ್ಲೆಯಾದ್ಯಂತ ವೈವಿದ್ಯಮಯ ಅರ್ಥಪೂರ್ಣ ಸೇವಾ ಕಾರ್ಯ ಚಟುವಟಿಕೆಗಳ ಮೂಲಕ ಯಶಸ್ವಿಗೊಳಿಸಲು ಬದ್ಧತೆಯಿಂದ ಶ್ರಮಿಸಿದ ಎಲ್ಲರಿಗೂ ಪಕ್ಷದ ವತಿಯಿಂದ ಅಭಿನಂದನೆಗಳು. ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಜನವಿರೋಧಿ ನೀತಿಗಳನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಅ.26ರಂದು ಜಿಲ್ಲಾ ಕೇಂದ್ರದಲ್ಲಿ 'ಅಹೋರಾತ್ರಿ ಬೃಹತ್ ಪ್ರತಿಭಟನೆ' ನಡೆಯಲಿದೆ. ಪಕ್ಷದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಜೊತೆಗೆ ಬೂತ್ ಮಟ್ಟದಲ್ಲಿ ಸದೃಢ ಪಕ್ಷ ಸಂಘಟನೆಯೊಂದಿಗೆ ಪಕ್ಷದ ಗೆಲುವಿಗೆ ಎಲ್ಲರೂ ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಪಕ್ಷದ ಸಂಘಟನಾತ್ಮಕ ವಿಚಾರ ಮತ್ತು ಚುನಾವಣಾ ಪೂರ್ವ ಸಿದ್ಧತೆಗಳ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು.

ಚುನಾವಣಾ ನಿರ್ವಹಣೆಯ ಕುರಿತು ವಿಸ್ತ್ರತ ವಿಚಾರ ವಿನಿಮಯ ನಡೆಯಿತು. ಮಂಡಲವಾರು ಕಾರ್ಯ ಚಟುವಟಿಕೆಗಳ ವರದಿ ಮಂಡನೆ ನಡೆಯಿತು.

ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಜಿಲ್ಲಾ ಉಪಾಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಗೀತೆ ಹಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ ಶೆಟ್ಟಿ ಸ್ವಾಗತಿಸಿ, ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Ads on article

Advertise in articles 1

advertising articles 2

Advertise under the article