-->
 ವಿವಿಧ ಬೇಡಿಕೆಗಳ ಈಡೇರಿಕೆಗೆ  ಸಿಎಂ ಡಿ.ಕೆ. ಶಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಎಂ ಡಿ.ಕೆ. ಶಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ


ಉಡುಪಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಶಾಸಕ ಯಶ್ ಪಾಲ್ ಸುವರ್ಣ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು. ಉಚ್ಚಿಲಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಸಲ್ಲಿಸಿ, ಜನಪರ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಈಡೇರಿಸುವಂತೆ ಕೋರಿದರು. 

ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ವಿಶೇಷ ಚೇತನ ಮಕ್ಕಳ ಶಿಕ್ಷಕರು, ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿ ಮತ್ತು ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು. ಅವರ ಸೇವೆಗೆ ಅನುಗುಣವಾಗಿ ಸಮರ್ಪಕ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಆರ್ಥಿಕ ಸ್ಥಿರತೆ ಹಾಗೂ ಉದ್ಯೋಗ ಭದ್ರತೆಯನ್ನು ಖಚಿತಪಡಿಸಬೇಕು ಎಂದು ಮನವಿ ಮಾಡಿದರು. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಕಾಲುಸಂಕ, ತಡೆಗೋಡೆ ಹಾಗೂ ಬೀದಿದೀಪ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 50 ಕೋಟಿ ವಿಶೇಷ ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ನಾಡದೋಣಿ ಮೀನುಗಾರರು ಸೀಮೆಎಣ್ಣೆ ಬೆಲೆ ಹಾಗೂ ನಿರ್ವಹಣಾ ವೆಚ್ಚದ ಹೆಚ್ಚಳದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಡದೋಣಿಗಳಿಗೆ ನೀಡುವ ಸೀಮೆಎಣ್ಣೆ ಸಬ್ಸಿಡಿಯನ್ನು ಹೆಚ್ಚಿಸಿ, ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯಕ್ಕೆ ನೆರವಾಗಬೇಕು ಎಂದು ಆಗ್ರಹಿಸಿದ್ದಾರೆ.

ಮಲ್ಪೆ ಮೀನುಗಾರಿಕಾ ಬಂದರಿನ ಸಮಗ್ರ ಅಭಿವೃದ್ಧಿಗಾಗಿ ನೂತನ ಜಟ್ಟಿ, ಔಟರ್ ಹಾರ್ಬರ್ ನಿರ್ಮಾಣ, ಸಮರ್ಪಕ ಪಾರ್ಕಿಂಗ್ ಹಾಗೂ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುವಂತೆ ಕೋರಿದ್ದಾರೆ.

ಜಿಲ್ಲೆಯಲ್ಲಿ ಜನ ಸಾಮಾನ್ಯರಿಗೆ ಕಟ್ಟಡ ನಿರ್ಮಾಣ ಸಾಮಗ್ರಿ ಲಭ್ಯತೆ ಹಿನ್ನೆಲೆಯಲ್ಲಿ ಕ್ವಾರಿ, ಸ್ಟೋನ್ ಕ್ರಷರ್ ಹಾಗೂ ಎಂ-ಸ್ಯಾಂಡ್ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಬೇಕು. ನಿರ್ಮಾಣ ಸಾಮಗ್ರಿಗಳ ಪೂರೈಕೆಯಲ್ಲಿನ ಅಡಚಣೆಗಳನ್ನು ನಿವಾರಿಸಿ, ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ಕಾನೂನುಬದ್ಧ ಹಾಗೂ ಕಾರ್ಯಸಾಧ್ಯ ಪರಿಹಾರಗಳನ್ನು ರೂಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article