-->
 ಸ್ತನ ಕ್ಯಾನ್ಸರ್ ಜಾಗೃತಿ: ಗುಲಾಬಿ ಬೆಳಕಿನಲ್ಲಿ ಕಂಗೊಳಿಸಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ

ಸ್ತನ ಕ್ಯಾನ್ಸರ್ ಜಾಗೃತಿ: ಗುಲಾಬಿ ಬೆಳಕಿನಲ್ಲಿ ಕಂಗೊಳಿಸಿದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ


ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಶಿರಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಟ್ಟಡವು ಗುಲಾಬಿ ಬಣ್ಣದ ದೀಪಾಲಂಕಾರದಿಂದ ಕಂಗೊಳಿಸಿತು.


ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಮಣಿಪಾಲ ಮಹಿಳಾ ಸಮಾಜ, ಇನ್ನರ್ ವೀಲ್ ಮಣಿಪಾಲ ಹಾಗೂ ಪವರ್ ಗ್ರೂಪ್ ಮಣಿಪಾಲದ ಸಹಯೋಗದಲ್ಲಿ ಶುಕ್ರವಾರ ಸಂಜೆ 6.30ಕ್ಕೆ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು.


ಕಾರ್ಯಕ್ರಮದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮೆಡಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಅನಂತ್ ಪೈ, ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಸುಲತಾ ಭಂಡಾರಿ, ಪ್ಯಾಲಿಯೇಟಿವ್ ಮೆಡಿಸಿನ್ ಮತ್ತು ಸಪೋರ್ಟಿವ್ ಕೇರ್ ವಿಭಾಗದ ಮುಖ್ಯಸ್ಥೆ ಡಾ. ಅನುಜಾ, ಮಣಿಪಾಲ ಮಹಿಳಾ ಸಮಾಜದ ಉಪಾಧ್ಯಕ್ಷೆ ಹಾಗೂ ಇನ್ನರ್ ವೀಲ್ ಮಣಿಪಾಲದ ಜಿಲ್ಲಾ ಖಜಾಂಚಿ ದೀಪಾ ಭಂಡಾರಿ ಮತ್ತು ಪವರ್ ಗ್ರೂಪ್ ಮಣಿಪಾಲದ ಕಾರ್ಯದರ್ಶಿ ಸುಜಯಾ ಶೆಟ್ಟಿ ಉಪಸ್ಥಿತರಿದ್ದರು. ಕ್ಯಾನ್ಸರ್ ವಿಭಾಗದ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಹಯೋಗಿ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.


ವಿಶ್ವದಾದ್ಯಂತ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾಗಿ ಆಚರಿಸಲಾಗುತ್ತದೆ. ಈ ವರ್ಷದ ‘ಪ್ರತಿಯೊಂದು ಕಥೆಯೂ ವಿಶಿಷ್ಟ, ಪ್ರತಿಯೊಂದು ಪಯಣವೂ ಮುಖ್ಯ’ ಎಂಬ ಧ್ಯೇಯವಾಕ್ಯವು ಸ್ತನ ಕ್ಯಾನ್ಸರ್ ಎದುರಿಸುವ ಪ್ರತಿಯೊಬ್ಬ ಮಹಿಳೆಯ ಅನುಭವವೂ ವಿಭಿನ್ನವಾಗಿದ್ದು, ಅವರಿಗೆ ಆರಂಭಿಕ ಪತ್ತೆಯಿಂದ ಚಿಕಿತ್ಸೆ ಮತ್ತು ಚೇತರಿಕೆಯವರೆಗೆ ಸೂಕ್ತ ಆರೈಕೆ ಹಾಗೂ ಬೆಂಬಲ ಅಗತ್ಯ ಎಂಬ ಸಂದೇಶ ಸಾರುತ್ತದೆ.

ಗುಲಾಬಿ ಬಣ್ಣವು ಸ್ತನ ಕ್ಯಾನ್ಸರ್ ಜಾಗೃತಿಯ ಅಂತರರಾಷ್ಟ್ರೀಯ ಸಂಕೇತವಾಗಿದೆ. ಆಸ್ಪತ್ರೆಯ ಕಟ್ಟಡವನ್ನು ಗುಲಾಬಿ ಬೆಳಕಿನಿಂದ ಅಲಂಕರಿಸುವ ಮೂಲಕ ಸ್ತನ ಕ್ಯಾನ್ಸರ್‌ನ ಆರಂಭಿಕ ಪತ್ತೆಯ ಮಹತ್ವವನ್ನು ಜನರಿಗೆ ತಿಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಮಹಿಳೆಯರು ತಮ್ಮ ದೇಹದಲ್ಲಿನ ಬದಲಾವಣೆಗಳ ಬಗ್ಗೆ ಜಾಗೃತರಾಗಿದ್ದು, ಯಾವುದೇ ಅಸಹಜ ಲಕ್ಷಣಗಳು ಕಂಡುಬಂದರೆ ವಿಳಂಬಿಸದೆ ವೈದ್ಯರನ್ನು ಸಂಪರ್ಕಿಸಬೇಕು ಎಂಬ ಸಂದೇಶವನ್ನು ಈ ಅಭಿಯಾನ ನೀಡಿತು. ಜತೆಗೆ, ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು, ಕ್ಯಾನ್ಸರ್‌ನಿಂದ ಚೇತರಿಸಿಕೊಂಡವರು ಹಾಗೂ ಅವರ ಕುಟುಂಬಗಳಿಗೆ ಬೆಂಬಲ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಒಂದಾಗಿದ್ದು, ಭಯ, ಹಿಂಜರಿಕೆ ಮತ್ತು ಜಾಗೃತಿಯ ಕೊರತೆಯಿಂದಾಗಿ ಕೆಲವರು ತಡವಾದ ಹಂತದಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ. ಮಹಿಳೆಯರು ತಮ್ಮ ದೇಹದಲ್ಲಿನ ಬದಲಾವಣೆಗಳನ್ನು ನಿರ್ಲಕ್ಷಿಸದೆ, ಆರಂಭಿಕ ಲಕ್ಷಣಗಳು ಕಂಡುಬಂದಾಗಲೇ ವೈದ್ಯರನ್ನು ಸಂಪರ್ಕಿಸಬೇಕು. ಪ್ರತಿಯೊಬ್ಬ ಮಹಿಳೆಯ ಕ್ಯಾನ್ಸರ್ ಪಯಣ ವಿಭಿನ್ನವಾಗಿರುವುದರಿಂದ ಅವರಿಗೆ ಪ್ರತಿ ಹಂತದಲ್ಲೂ ಜ್ಞಾನ, ಸಹಾನುಭೂತಿ ಮತ್ತು ಸೂಕ್ತ ಆರೈಕೆ ಒದಗಿಸುವುದು ಬೋಧನಾ ಆಸ್ಪತ್ರೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮೆಡಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಅನಂತ್ ಪೈ ಮಾತನಾಡಿ, ಸ್ತನ ಕ್ಯಾನ್ಸರ್ ಮಹಿಳೆಯೊಂದಿಗೆ ಅವರ ಇಡೀ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ಜಾಗೃತಿಯೇ ಈ ಕಾಯಿಲೆಯನ್ನು ಎದುರಿಸುವ ಮೊದಲ ಹೆಜ್ಜೆ. ಆರಂಭಿಕ ಹಂತದಲ್ಲಿ ಪತ್ತೆಯಾದರೆ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಹಿಳೆಯರು ಸ್ತನದಲ್ಲಿನ ಯಾವುದೇ ಅಸಹಜ ಬದಲಾವಣೆಗಳನ್ನು ಗಮನಿಸಿದರೆ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ತಿಳಿಸಿದರು.

ಸ್ತನ ಕ್ಯಾನ್ಸರ್ ಜಾಗೃತಿಯ ಸಂಕೇತವಾಗಿ ಆಸ್ಪತ್ರೆಯ ಕಟ್ಟಡವು ಅಕ್ಟೋಬರ್ 18ರ ಭಾನುವಾರದವರೆಗೆ ಗುಲಾಬಿ ಬಣ್ಣದಲ್ಲಿ ಕಂಗೊಳಿಸಲಿದೆ. ಅಕ್ಟೋಬರ್ ತಿಂಗಳಿಡೀ ಆಸ್ಪತ್ರೆಯ ವೈದ್ಯರು ಸ್ತನ ಸ್ವಯಂ ಪರೀಕ್ಷೆ, ಅಪಾಯಕಾರಿ ಅಂಶಗಳು ಮತ್ತು ಆರಂಭಿಕ ಪತ್ತೆಯ ಮಹತ್ವದ ಕುರಿತು ಜಾಗೃತಿ ಉಪನ್ಯಾಸಗಳನ್ನು ನಡೆಸಲಿದ್ದಾರೆ.

Ads on article

Advertise in articles 1

advertising articles 2

Advertise under the article