ವಾರಾಂತ್ಯದಲ್ಲಿ ಕಡಲ ತೀರದಲ್ಲಿ ಯುವಕರ ಗಾಳದ ಬೇಟೆ: ಒತ್ತಡ ಮರೆಸುವ ಹವ್ಯಾಸವೀಗ ಟ್ರೆಂಡ್
ಸಮುದ್ರದ ಅಲೆಗಳ ನಿರಂತರ ಅಬ್ಬರ, ಮುಖಕ್ಕೆ ತಾಕುವ ತಂಪಾದ ಗಾಳಿ, ಕೈಯಲ್ಲೊಂದು ಗಾಳದ ರಾಡ್, ಕಣ್ಣು ಮಾತ್ರ ನೀರಿನ ಮೇಲ್ಮೈಯಲ್ಲಿ ತೇಲುವ ಗಾಳದತ್ತ! ಯಾವ ಕ್ಷಣದಲ್ಲಿ ಮೀನು ಗಾಳಕ್ಕೆ ಸಿಲುಕುತ್ತದೆಯೋ ಎಂಬ ಕುತೂಹಲ, ತಾಳ್ಮೆಯ ಪರೀಕ್ಷೆ, ಮೀನು ಸಿಕ್ಕಾಗ ಸಿಗುವ ಸಂಭ್ರಮ... ಕರಾವಳಿಯ ಕಡಲತೀರಗಳಲ್ಲಿ ಈಗ ಇಂತಹ ದೃಶ್ಯಗಳು ಸಾಮಾನ್ಯವಾಗುತ್ತಿವೆ. ಮೀನು ಹಿಡಿಯುವುದು ಎಂದರೆ ಕೇವಲ ಹೊಟ್ಟೆಪಾಡಿನ ಕಾಯಕವಲ್ಲ, ಮನಸ್ಸಿಗೆ ಮುದ ನೀಡುವ ಹವ್ಯಾಸವೂ ಆಗಿದೆ.
ಒಂದು ಕಾಲದಲ್ಲಿ ಮೀನುಗಾರರ ಬಿಡುವಿನ ಚಟುವಟಿಕೆ ಅಥವಾ ಮೀನುಗಾರಿಕಾ ನಿಷೇಧದ ಅವಧಿಯಲ್ಲಿ ಕಾಲ ಕಳೆಯುವ ಮಾರ್ಗವಾಗಿದ್ದ ಗಾಳ ಹಾಕಿ ಮೀನು ಹಿಡಿಯುವುದು ಇಂದು ಕರಾವಳಿಯಲ್ಲಿ ಹೊಸ ಟ್ರೆಂಡ್ ಆಗಿ ಬೆಳೆದಿದೆ. ಮಂಗಳೂರು, ಉಡುಪಿ, ಮಲ್ಪೆ, ಕಾರವಾರ ಸೇರಿದಂತೆ ಕರಾವಳಿಯ ವಿವಿಧ ಕಡಲತೀರಗಳು, ನದಿಮುಖಗಳು ಹಾಗೂ ಬ್ರೇಕ್ವಾಟರ್ಗಳ ಬಳಿ ಯುವಕರು, ಹವ್ಯಾಸಿ ಮೀನುಗಾರರು ಮತ್ತು ಪ್ರವಾಸಿಗರು ಗಾಳ ಹಿಡಿದು ಕುಳಿತುಕೊಳ್ಳುತ್ತಿರುವುದು ಈ ಹವ್ಯಾಸದ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಯುವಜನತೆ ವಾರದ ಬಿಡುವಿನ ದಿನವನ್ನು ಪ್ರಕೃತಿಯ ನಡುವೆ ಕಳೆಯಲು ಇಷ್ಟಪಡುತ್ತಿದ್ದಾರೆ. ಇಂತಹವರಿಗೆ ಸಮುದ್ರದ ಅಲೆಗಳ ಸದ್ದು ಆಲಿಸುತ್ತಾ, ತಂಪಾದ ಗಾಳಿಯನ್ನು ಆಸ್ವಾದಿಸುತ್ತಾ ಗಾಳ ಹಾಕಿ ಕುಳಿತುಕೊಳ್ಳುವುದು ವಿಶಿಷ್ಟ ಅನುಭವ. ಮಲ್ಪೆ, ಪಡುಕರೆ ಭಾಗದ ಬ್ರೇಕ್ವಾಟರ್ಗಳು ಹಾಗೂ ಸುತ್ತಮುತ್ತಲಿನ ಹಿನ್ನೀರು ಪ್ರದೇಶಗಳಲ್ಲಿ ಗಾಳ ಹಾಕುವವರನ್ನು ಕಾಣಬಹುದು. ಕೆಲವರು ಸ್ನೇಹಿತರೊಂದಿಗೆ ಗುಂಪಾಗಿ ಬಂದರೆ, ಇನ್ನು ಕೆಲವರು ಏಕಾಂತದಲ್ಲಿ ಕುಳಿತು ಸಮುದ್ರದ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ಇಲ್ಲಿ ಮೀನು ಸಿಗುವುದಕ್ಕಿಂತಲೂ ಮೀನುಗಾಗಿ ಕಾಯುವ ಸಮಯವೇ ಅವರಿಗೆ ಹೆಚ್ಚು ಖುಷಿ ನೀಡುತ್ತದೆ.
ಮಲ್ಪೆಯಲ್ಲಿ ನಿಯಮಿತವಾಗಿ ಗಾಳ ಹಾಕುವ ಉದಯ ಮಠದಬೆಟ್ಟು ಅವರಿಗೆ ಇದು ಕೇವಲ ಮೀನು ಹಿಡಿಯುವ ಚಟುವಟಿಕೆಯಲ್ಲ, ವಾರದ ಒತ್ತಡವನ್ನು ಮರೆಸುವ ಹವ್ಯಾಸ.
"ಪ್ರತಿ ಭಾನುವಾರ ಅಥವಾ ಬಿಡುವಿನ ಸಮಯದಲ್ಲಿ ಮಲ್ಪೆಗೆ ಬಂದು ಗಾಳ ಹಾಕುತ್ತೇವೆ. ಇದಕ್ಕಾಗಿ ಅತ್ಯಾಧುನಿಕ ಗಾಳ ಹಾಕುವ ಉಪಕರಣಗಳನ್ನೂ ಖರೀದಿಸಿದ್ದೇನೆ. ಕಾನೆ ಸೇರಿದಂತೆ ವಿವಿಧ ಜಾತಿಯ ಮೀನುಗಳು ಗಾಳಕ್ಕೆ ಸಿಗುತ್ತವೆ. ಆದರೆ ಎಷ್ಟು ಮೀನು ಹಿಡಿಯುತ್ತೇವೆ ಎನ್ನುವುದು ಮುಖ್ಯವಲ್ಲ. ವಾರವಿಡೀ ದುಡಿದು ಬ್ಯುಸಿಯಾಗಿರುವ ನಮಗೆ ಗಾಳ ಹಾಕುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುತ್ತಾ ಈ ಹವ್ಯಾಸವನ್ನು ಎಂಜಾಯ್ ಮಾಡುತ್ತೇವೆ" ಎನ್ನುತ್ತಾರೆ ಉದಯ ಮಠದಬೆಟ್ಟು. ಮೀನಿಗಾಗಿ ಗಂಟೆಗಟ್ಟಲೆ ಕಾಯಬೇಕಾದರೂ ಇವರಿಗೆ ಬೇಸರವಿಲ್ಲ. ಕೆಲವೊಮ್ಮೆ ಗಾಳಕ್ಕೆ ಮೀನು ಸಿಲುಕಿದರೆ ಸಂಭ್ರಮ. ನಿರೀಕ್ಷೆಯಷ್ಟು ಮೀನು ಸಿಗದಿದ್ದರೂ ಸಮುದ್ರದ ದಡದಲ್ಲಿ ಕಳೆದ ಕ್ಷಣಗಳೇ ಸಮಾಧಾನ ನೀಡುತ್ತವೆ. ಅದಕ್ಕಾಗಿಯೇ ಈ ಹವ್ಯಾಸಕ್ಕೆ ಮಾರುಹೋಗುವವರ ಸಂಖ್ಯೆ ಹೆಚ್ಚುತ್ತಿದೆ.
ಹಿಂದೆ ಕೈಗಾಳ, ನೂಲು, ಕೊಕ್ಕೆ ಹಾಗೂ ಬೆಟ್ ಬಳಸಿ ಮೀನು ಹಿಡಿಯುತ್ತಿದ್ದ ಕಾಲವಿತ್ತು. ಈಗ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಗಾಳ ಹಾಕುವ ಉಪಕರಣಗಳೂ ಬದಲಾಗಿವೆ. ರೀಲ್ಗಳನ್ನು ಹೊಂದಿರುವ ರಾಡ್ಗಳು, ವಿವಿಧ ಗಾತ್ರದ ನೂಲುಗಳು, ವಿಶೇಷ ಕೊಕ್ಕೆಗಳು, ಕೃತಕ ಬೆಟ್ಗಳು ಹಾಗೂ ರಾತ್ರಿ ವೇಳೆ ಗೋಚರಿಸುವ ರೇಡಿಯಂ ಗಾಳಗಳ ಬಳಕೆ ಹೆಚ್ಚಾಗಿದೆ.
ಮೀನುಗಳ ಜಾತಿ, ಗಾಳ ಹಾಕುವ ಸ್ಥಳ ಮತ್ತು ಸಮುದ್ರದ ಪರಿಸ್ಥಿತಿಗೆ ಅನುಗುಣವಾಗಿ ಉಪಕರಣಗಳನ್ನು ಆಯ್ಕೆ ಮಾಡಲಾಗುತ್ತದೆ. ಕೆಲವರು ಹವ್ಯಾಸಕ್ಕಾಗಿ ಸರಳ ಉಪಕರಣಗಳನ್ನು ಬಳಸಿದರೆ, ಆಸಕ್ತರು ಉತ್ತಮ ಗುಣಮಟ್ಟದ ಉಪಕರಣಗಳನ್ನು ಖರೀದಿಸಿ ಈ ಚಟುವಟಿಕೆಗೆ ವಿಶೇಷ ಸಿದ್ಧತೆ ಮಾಡಿಕೊಂಡೇ ಬರುತ್ತಾರೆ. ಗಾಳಕ್ಕೆ ಮೀನು ಸಿಲುಕಿದಾಗ ಅದನ್ನು ಜಾಗರೂಕತೆಯಿಂದ ದಡಕ್ಕೆ ಎಳೆಯುವ ಕೌಶಲವೂ ಅಗತ್ಯ. ಹೀಗಾಗಿ ಆಂಗ್ಲಿಂಗ್ ಕೇವಲ ಅದೃಷ್ಟದ ಆಟವಲ್ಲ; ತಾಳ್ಮೆ, ಸಮಯಪ್ರಜ್ಞೆ ಮತ್ತು ಅನುಭವಕ್ಕೂ ಇಲ್ಲಿ ಮಹತ್ವವಿದೆ.
“ಮೀನು ತಿನ್ನುವ ಆಸೆಯಲ್ಲಿ ಗಾಳ ಹಾಕುವುದೇ ಅಲ್ಲ; ಆದರೂ ಮೀನು ಸಿಕ್ಕಾಗ ಸಿಗುವ ತೃಪ್ತಿಯೇ ಬೇರೆ. ಬೇಕಾದ್ರೆ ಮೀನನ್ನು ವಾಪಾಸು ನೀರಿಗೇ ಬಿಡ್ತೇವೆ! ಆದರೆ ಒಮ್ಮೆ ಆ ಗಾಳಕ್ಕೆ ಮೀನು ಸಿಕ್ಕಿ ‘ಗರ್’ ಅಂತ ವೈಬ್ರೇಟ್ ಆದ ಶಬ್ದ ಆಗುವಾಗ ಸಿಗುವ ಖುಷಿ ಈ ಲೋಕದ್ದಲ್ಲ” ಎನ್ನುತ್ತಾರೆ ಉದ್ಯಮಿ ಲೋಕೇಶ್.
ಕರಾವಳಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸವು ಈಗ ಮನರಂಜನೆಯ ಮಿತಿಯನ್ನು ಮೀರಿ ಕ್ರೀಡಾ ಚಟುವಟಿಕೆಯ ಸ್ವರೂಪವನ್ನೂ ಪಡೆದುಕೊಳ್ಳುತ್ತಿದೆ. ಮಲ್ಪೆ, ಕಾರವಾರದ ಬೈತಖೋಲ್ ಬ್ರೇಕ್ವಾಟರ್ ಹಾಗೂ ಮಂಗಳೂರಿನ ಪಣಂಬೂರು ಬೀಚ್ಗಳಂತಹ ಪ್ರದೇಶಗಳಲ್ಲಿ ಆಂಗ್ಲಿಂಗ್ ಸ್ಪರ್ಧೆಗಳು ನಡೆಯುತ್ತಿದ್ದು, ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ತಮ್ಮ ಕೌಶಲ ಪ್ರದರ್ಶಿಸಲು ವೇದಿಕೆ ದೊರೆಯುತ್ತಿದೆ. ಸ್ಥಳೀಯ ಹವ್ಯಾಸಿಗಳ ಜೊತೆಗೆ ಹೊರರಾಜ್ಯಗಳ ಸ್ಪರ್ಧಿಗಳೂ ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಆಂಗ್ಲಿಂಗ್ಗೆ ದೊರೆಯುತ್ತಿರುವ ಗಮನವನ್ನು ತೋರಿಸುತ್ತದೆ.
ಕರಾವಳಿ ಎಂದರೆ ಮೀನುಗಾರಿಕೆ, ಕಡಲತೀರದ ಪ್ರವಾಸ, ಸಮುದ್ರಾಹಾರ ಹಾಗೂ ಸೂರ್ಯಾಸ್ತದ ಸೊಬಗು ಮಾತ್ರವಲ್ಲ. ಈಗ ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸವೂ ಕರಾವಳಿಯ ಜೀವನಶೈಲಿಯ ಒಂದು ಭಾಗವಾಗಿ ಗುರುತಿಸಿಕೊಳ್ಳುತ್ತಿದೆ. ಪ್ರಕೃತಿಯೊಂದಿಗೆ ಬೆರೆಯುವ ಅವಕಾಶ, ಸ್ನೇಹಿತರೊಂದಿಗೆ ಕಳೆಯುವ ಸಮಯ, ಮೀನು ಸಿಗುವ ಕ್ಷಣದ ರೋಮಾಂಚನ—ಇವೆಲ್ಲವೂ ಈ ಹವ್ಯಾಸವನ್ನು ಜನಪ್ರಿಯಗೊಳಿಸುತ್ತಿವೆ.
.jpeg)
.jpeg)

