ನ. 15ರಿಂದ ಯಶವಂತಪುರ–ಮಡಗಾಂವ್ ಹೊಸ ವಂದೇ ಭಾರತ್ ರೈಲು ಸಂಚಾರ
ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಸ್ಪಂದನೆಯಾಗಿ ಯಶವಂತಪುರ–ಮಡಗಾಂವ್ ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ. ನವೆಂಬರ್ 15ರಿಂದ ಈ ರೈಲು ಕಾರ್ಯಾಚರಣೆ ಪ್ರಾರಂಭಿಸಲಿದ್ದು, ಉಡುಪಿ, ಕುಂದಾಪುರ, ಬೈಂದೂರು, ಮುರ್ಡೇಶ್ವರ ಹಾಗೂ ಕಾರವಾರ ಸೇರಿದಂತೆ ಮಾರ್ಗಮಧ್ಯೆ 14 ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ಕುರಿತು ಕೊಂಕಣ ರೈಲ್ವೆ ನಿಗಮವು ಅಧಿಸೂಚನೆ ಸಂಖ್ಯೆ 169/2026-27ರ ಮೂಲಕ ಅಧಿಕೃತ ಪ್ರಕಟಣೆ ಹೊರಡಿಸಿದೆ. ನೈಋತ್ಯ ರೈಲ್ವೆಯ ಸೂಚನೆಯಂತೆ ರೈಲು ಸಂಚಾರ ಆರಂಭವಾಗಲಿದೆ.
ರೈಲು ಸಂಖ್ಯೆ 26655 ಯಶವಂತಪುರ–ಮಡಗಾಂವ್ ವಂದೇ ಭಾರತ್ ಪ್ರತಿದಿನ ಬೆಳಗ್ಗೆ 7.35ಕ್ಕೆ ಯಶವಂತಪುರದಿಂದ ಹೊರಟು ರಾತ್ರಿ 8.55ಕ್ಕೆ ಮಡಗಾಂವ್ ತಲುಪಲಿದೆ. ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಈ ರೈಲು ಸಂಚರಿಸಲಿದೆ.
ಅದೇ ರೀತಿ ರೈಲು ಸಂಖ್ಯೆ 26656 ಮಡಗಾಂವ್–ಯಶವಂತಪುರ ವಂದೇ ಭಾರತ್ ಬೆಳಗ್ಗೆ 8.20ಕ್ಕೆ ಮಡಗಾಂವ್‌ನಿಂದ ಹೊರಟು ರಾತ್ರಿ 9.15ಕ್ಕೆ ಯಶವಂತಪುರ ತಲುಪಲಿದೆ. ಗುರುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ.
ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ತೋಕೂರು, ಉಡುಪಿ, ಕುಂದಾಪುರ, ಮೂಕಾಂಬಿಕಾ ರಸ್ತೆ ಬೈಂದೂರು, ಮುರ್ಡೇಶ್ವರ, ಗೋಕರ್ಣ ರಸ್ತೆ ಹಾಗೂ ಕಾರವಾರ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಹೊಂದಿರಲಿದೆ.
16 ಬೋಗಿಗಳ ಅತ್ಯಾಧುನಿಕ ವಂದೇ ಭಾರತ್ ರೈಲು ಪ್ರಯಾಣಿಕರಿಗೆ ವೇಗದ ಹಾಗೂ ಆರಾಮದಾಯಕ ಪ್ರಯಾಣದ ಅನುಭವ ಒದಗಿಸಲಿದೆ.
ಇದೇ ವೇಳೆ ಮಡಗಾಂವ್–ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 20645/20646ರ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ನವೆಂಬರ್ 15ರಿಂದ ರದ್ದುಗೊಳಿಸಲಾಗುವುದು ಎಂದು ಕೊಂಕಣ ರೈಲ್ವೆ ತಿಳಿಸಿದೆ.
ಹೊಸ ರೈಲು ಸೇವೆಯಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವುದರ ಜತೆಗೆ ಪ್ರವಾಸೋದ್ಯಮ, ವ್ಯಾಪಾರ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.