15 ಅಡಿ ಕಂದಕಕ್ಕೆ ಉರುಳಿದ ಕಾರು: ಐವರಿಗೆ ಗಾಯ
Thursday, November 12, 2026
ರಾಷ್ಟ್ರೀಯ ಹೆದ್ದಾರಿ 73ರ ಕಲ್ಮಂಜ ಗ್ರಾಮದ ನಿಡಿಗಲ್ ಎಂಬಲ್ಲಿ ಗುರುವಾರ ಮುಂಜಾನೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸುಮಾರು 15 ಅಡಿ ಆಳದ ಕಂದಕಕ್ಕೆ ಬುಡಮೇಲಾಗಿ ಉರುಳಿಬಿದ್ದ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಮಂದಿಯ ಪೈಕಿ ಐವರು ಗಾಯಗೊಂಡಿದ್ದು, ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ ಮೂಲದ ಕಾರು ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿತ್ತು. ಈ ವೇಳೆ ನಿಡಿಗಲ್ ಸಮೀಪ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಗೆ ಚಲಿಸಿ, ಸುಮಾರು 15 ಅಡಿ ಆಳದ ಕಂದಕಕ್ಕೆ ಉರುಳಿದೆ. ಕಾರು ಸಂಪೂರ್ಣವಾಗಿ ಬುಡಮೇಲಾದ ಪರಿಣಾಮ ಅದರಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ.
ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದ್ದು, ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.