ಬಿಸಿರೋಡು ಫ್ಲೈಓವರ್‌ನಿಂದ ಸರ್ವಿಸ್ ರಸ್ತೆಗೆ ಬಿದ್ದ ಬುಲೆಟ್ ಸವಾರ; ಗಂಭೀರ ಗಾಯ
Wednesday, November 11, 2026
ಬಿಸಿರೋಡಿನ ಫ್ಲೈಓವರ್‌ನಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಬುಲೆಟ್ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ಫ್ಲೈಓವರ್‌ನಿಂದ ಕೆಳಗಿನ ಸರ್ವಿಸ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಎರಡು ಬುಲೆಟ್ ಬೈಕ್‌ಗಳು ಫ್ಲೈಓವರ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಸವಾರ ಕೆಳಕ್ಕೆ ಬಿದ್ದಿದ್ದಾನೆಯೇ ಅಥವಾ ಬೈಕ್ ನಿಯಂತ್ರಣ ತಪ್ಪಿ ಫ್ಲೈಓವರ್‌ನಿಂದ ಕೆಳಕ್ಕೆ ಬಿದ್ದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಫ್ಲೈಓವರ್‌ನಿಂದ ಕೆಳಕ್ಕೆ ಬಿದ್ದ ಬೈಕ್ ಸವಾರ ಸರ್ವಿಸ್ ರಸ್ತೆಗೆ ಅಪ್ಪಳಿಸಿದ್ದು, ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಸವಾರ ಹೆಲ್ಮೆಟ್ ಧರಿಸಿದ್ದರೂ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ. ಘಟನೆಯ ಸಂದರ್ಭದಲ್ಲಿ ಸರ್ವಿಸ್ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.
2016ರಲ್ಲಿಯೂ ಇದೇ ಫ್ಲೈಓವರ್‌ನಲ್ಲಿ ರಾತ್ರಿ ವೇಳೆ ಬೈಕ್‌ವೊಂದು ತಡೆಗೋಡೆಗೆ ಡಿಕ್ಕಿಯಾಗಿ ಕೆಳಕ್ಕೆ ಬಿದ್ದ ಪರಿಣಾಮ ಸವಾರ ಮೃತಪಟ್ಟಿದ್ದ ಘಟನೆ ನಡೆದಿತ್ತು. ಇದೀಗ ಮತ್ತೊಮ್ಮೆ ಫ್ಲೈಓವರ್‌ನಿಂದ ಬೈಕ್ ಸವಾರ ಕೆಳಕ್ಕೆ ಬಿದ್ದಿರುವುದು ಈ ರಸ್ತೆಯ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.