ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೆರಟೋಕೋನಸ್ ಪತ್ತೆ ಹಾಗೂ ಚಿಕಿತ್ಸೆಗೆ ನೂತನ ತಂತ್ರಜ್ಞಾನ ಸೌಲಭ್ಯ ಆರಂಭ
ಕೆರಟೋಕೋನಸ್ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದಲ್ಲಿ ಎರಡು ನೂತನ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಆರಂಭಿಸಲಾಗಿದೆ.
ವಿಶ್ವ ಕೆರಟೋಕೋನಸ್ ದಿನದ ಅಂಗವಾಗಿ ANTERION® ಕಾರ್ನಿಯಲ್ ಟೊಮೊಗ್ರಫಿ ಮತ್ತು ಟೊಪೊಗ್ರಫಿ ಉಪಕರಣ ಹಾಗೂ CXL UVR ರ್ಯಾಪಿಡ್ ಕೊಲಾಜೆನ್ ಕ್ರಾಸ್-ಲಿಂಕಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು.
ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಅವರು ನೂತನ ಸೌಲಭ್ಯಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕಾಮತ್, ಕಾರ್ನಿಯಾ ತಜ್ಞೆ ಡಾ. ದೀಕ್ಷಿತಾ ವಿ., ವಿಭಾಗದ ಬೋಧಕ ಸಿಬ್ಬಂದಿ, ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ಉಪಸ್ಥಿತರಿದ್ದರು.
ಕೆರಟೋಕೋನಸ್ ಎಂಬುದು ಕಣ್ಣಿನ ಮುಂಭಾಗದಲ್ಲಿರುವ ಪಾರದರ್ಶಕ ಪದರವಾದ ಕಾರ್ನಿಯಾ ಕ್ರಮೇಣ ತೆಳುವಾಗಿ, ಶಂಕುವಿನ ಆಕಾರದಲ್ಲಿ ಹೊರಚಾಚುವ ಕಾಯಿಲೆಯಾಗಿದೆ. ಇದರಿಂದ ದೃಷ್ಟಿ ಮಸುಕಾಗುವುದು ಹಾಗೂ ವಸ್ತುಗಳು ವಿರೂಪವಾಗಿ ಕಾಣಿಸುವ ಸಮಸ್ಯೆ ಉಂಟಾಗುತ್ತದೆ. ಸಾಮಾನ್ಯವಾಗಿ ಹದಿಹರೆಯದಲ್ಲಿ ಆರಂಭವಾಗುವ ಈ ಕಾಯಿಲೆ ಕಾಲಕ್ರಮೇಣ ಉಲ್ಬಣಗೊಳ್ಳುವ ಸಾಧ್ಯತೆಯಿದ್ದು, ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಅತ್ಯಂತ ಮುಖ್ಯವಾಗಿದೆ.
ಹೊಸತಾಗಿ ಅಳವಡಿಸಿರುವ ANTERION® ಉಪಕರಣವು ಕಾರ್ನಿಯಾದ ಆಕಾರ ಮತ್ತು ದಪ್ಪವನ್ನು ಅತ್ಯಂತ ನಿಖರವಾಗಿ ವಿಶ್ಲೇಷಿಸಲು ನೆರವಾಗಲಿದೆ. ಇದರಿಂದ ಆರಂಭಿಕ ಹಂತದ ಬದಲಾವಣೆಗಳನ್ನು ಗುರುತಿಸುವುದರ ಜೊತೆಗೆ ಕಾಯಿಲೆಯ ಪ್ರಗತಿಯನ್ನು ಗಮನಿಸಲು ಹಾಗೂ ಸೂಕ್ತ ಚಿಕಿತ್ಸೆಯನ್ನು ನಿರ್ಧರಿಸಲು ವೈದ್ಯರಿಗೆ ಅನುಕೂಲವಾಗಲಿದೆ.
ಇನ್ನು CXL UVR ರ್ಯಾಪಿಡ್ ಕ್ರಾಸ್-ಲಿಂಕಿಂಗ್ ವ್ಯವಸ್ಥೆಯು ಉಲ್ಬಣಗೊಳ್ಳುತ್ತಿರುವ ಕೆರಟೋಕೋನಸ್ ಕಾಯಿಲೆಯ ಚಿಕಿತ್ಸೆಗೆ ನೆರವಾಗಲಿದೆ. ಈ ಚಿಕಿತ್ಸೆಯಲ್ಲಿ ರೈಬೋಫ್ಲೇವಿನ್ (ವಿಟಮಿನ್ ಬಿ2) ಕಣ್ಣಿನ ಹನಿಗಳು ಮತ್ತು ನಿಯಂತ್ರಿತ ಅಲ್ಟ್ರಾವಯಲೆಟ್ ಬೆಳಕನ್ನು ಬಳಸಿಕೊಂಡು ಕಾರ್ನಿಯಾದ ಕೊಲಾಜೆನ್ ನಾರುಗಳನ್ನು ಬಲಪಡಿಸಲಾಗುತ್ತದೆ. ಇದರಿಂದ ಸೂಕ್ತ ರೋಗಿಗಳಲ್ಲಿ ಕಾಯಿಲೆಯ ಮತ್ತಷ್ಟು ಉಲ್ಬಣವನ್ನು ನಿಧಾನಗೊಳಿಸಲು ಅಥವಾ ತಡೆಯಲು ಸಾಧ್ಯವಾಗುತ್ತದೆ. ರ್ಯಾಪಿಡ್ ಪ್ರೋಟೋಕಾಲ್ ಮೂಲಕ ಚಿಕಿತ್ಸೆಯ ಅವಧಿಯನ್ನೂ ಕಡಿಮೆ ಮಾಡಬಹುದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸುಧಾಕರ್ ಕಂಟಿಪುಡಿ, ನೂತನ ತಂತ್ರಜ್ಞಾನಗಳ ಸೇರ್ಪಡೆಯಿಂದ ನೇತ್ರಶಾಸ್ತ್ರ ವಿಭಾಗದಲ್ಲಿ ಕಾರ್ನಿಯಾ ಸಂಬಂಧಿತ ಸಮಸ್ಯೆಗಳ ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯಗಳು ಮತ್ತಷ್ಟು ಬಲಗೊಂಡಿವೆ. ವಿಶ್ವ ಕೆರಟೋಕೋನಸ್ ದಿನದ ಹಿನ್ನೆಲೆಯಲ್ಲಿ ಈ ಸೌಲಭ್ಯಗಳನ್ನು ಆರಂಭಿಸುವ ಮೂಲಕ ಕಾಯಿಲೆಯ ಬಗ್ಗೆ ಹಾಗೂ ಆರಂಭಿಕ ರೋಗನಿರ್ಣಯದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಅವಕಾಶ ದೊರೆತಿದೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, ಕೆರಟೋಕೋನಸ್ ಸಾಮಾನ್ಯವಾಗಿ ಹದಿಹರೆಯದಲ್ಲಿ ಆರಂಭವಾಗುತ್ತದೆ. ಕನ್ನಡಕದ ಪವರ್ ಆಗಾಗ ಬದಲಾಗುವುದು, ದೃಷ್ಟಿ ಮಸುಕಾಗುವುದು ಅಥವಾ ವಸ್ತುಗಳು ವಿರೂಪವಾಗಿ ಕಾಣಿಸುವುದು ಇದರ ಆರಂಭಿಕ ಲಕ್ಷಣಗಳಾಗಿರಬಹುದು. ಇಂತಹ ಲಕ್ಷಣಗಳನ್ನು ಕೇವಲ ಕನ್ನಡಕ ಬದಲಾವಣೆಯ ಸಮಸ್ಯೆ ಎಂದು ನಿರ್ಲಕ್ಷಿಸದೆ, ಪೋಷಕರು ಹಾಗೂ ಯುವಜನರು ನೇತ್ರತಜ್ಞರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನೂತನ ಉಪಕರಣಗಳ ಅಳವಡಿಕೆಯಿಂದ ಕೆರಟೋಕೋನಸ್ ಕಾಯಿಲೆಯ ಪತ್ತೆ, ಮೇಲ್ವಿಚಾರಣೆ ಹಾಗೂ ಚಿಕಿತ್ಸೆಯನ್ನು ಒಂದೇ ವಿಭಾಗದಲ್ಲಿ ಪಡೆಯಲು ಸಾಧ್ಯವಾಗಲಿದೆ. ವಿಶೇಷವಾಗಿ ಮಕ್ಕಳು ಮತ್ತು ಯುವಜನರಲ್ಲಿ ನಿಯಮಿತ ಕಣ್ಣಿನ ತಪಾಸಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಆಸ್ಪತ್ರೆ ಮುಂದುವರಿಸಲಿದೆ.