ವೃದ್ಧಾಶ್ರಮಗಳು ಹೆಚ್ಚಾಗುವುದು ಆರೋಗ್ಯಯುತ ಸಮಾಜದ ಲಕ್ಷಣವಲ್ಲ: ವಿಶ್ವನಾಥ ಶೆಣೈ
ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುವುದು ಆರೋಗ್ಯಯುತ ಸಮಾಜದ ಒಳ್ಳೆಯ ಲಕ್ಷಣವಲ್ಲ. ಹಿರಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸುವ ಬದಲು ಮನೆಯಲ್ಲಿಯೇ ಪ್ರೀತಿ, ಗೌರವದಿಂದ ಆರೈಕೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಮಾಜ ಸೇವಕ ವಿಶ್ವನಾಥ ಶೆಣೈ ಅಭಿಪ್ರಾಯಪಟ್ಟರು.
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಸಂಭ್ರಮದ ಸರಣಿ ಕಾರ್ಯಕ್ರಮಗಳ ಅಂಗವಾಗಿ ಕೊಳಲಗಿರಿಯ ಸ್ವರ್ಗ ಆಶ್ರಮದಲ್ಲಿ ಆಯೋಜಿಸಿದ್ದ ‘ಚೈತನ್ಯ ರಂಗ ಆಶ್ರಮ ಸೇವಾ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಚಿಕ್ಕವರಿದ್ದಾಗ ಹೆತ್ತವರು ಪ್ರೀತಿ, ಕಾಳಜಿಯಿಂದ ಅವರನ್ನು ಬೆಳೆಸುತ್ತಾರೆ. ಆದರೆ ಅದೇ ಮಕ್ಕಳು ದೊಡ್ಡವರಾದ ಬಳಿಕ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ವಿಷಾದನೀಯ. ಇದು ನಮ್ಮ ಸಂಸ್ಕೃತಿಯಲ್ಲ. ಇನ್ನು ಕೆಲವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ವಿದೇಶಗಳಿಗೆ ಕಳುಹಿಸುತ್ತಾರೆ. ಮಕ್ಕಳು ಅಲ್ಲಿಯೇ ನೆಲೆಸುವುದರಿಂದ ಹೆತ್ತವರು ವೃದ್ಧಾಶ್ರಮಗಳಲ್ಲಿ ಜೀವನ ನಡೆಸುವಂತಾಗಿದೆ. ಏನೇ ಪರಿಸ್ಥಿತಿ ಇದ್ದರೂ ಹಿರಿಯರನ್ನು ಮನೆಯಲ್ಲಿಯೇ ನೋಡಿಕೊಳ್ಳುವ ಜವಾಬ್ದಾರಿಯನ್ನು ಕುಟುಂಬಗಳು ನಿಭಾಯಿಸಬೇಕು ಎಂದು ಅವರು ಆಶಿಸಿದರು.
ಸ್ವರ್ಗ ಆಶ್ರಮದ ಪ್ರವರ್ತಕರೂ ಆಗಿರುವ ಹೋಂ ಡಾಕ್ಟರ್ ಫೌಂಡೇಶನ್ನ ಡಾ. ಶಶಿಕಿರಣ್ ಶೆಟ್ಟಿ ಮಾತನಾಡಿ, ವಿವಿಧ ಕಾರಣಗಳಿಂದ ಆಶ್ರಮದಲ್ಲಿ ವಾಸಿಸುತ್ತಿರುವ ಹಿರಿಯರ ಮನಸ್ಸಿಗೆ ಸಂತೋಷ ಮತ್ತು ಉಲ್ಲಾಸ ನೀಡುವ ನಿಟ್ಟಿನಲ್ಲಿ ಸುಮನಸಾ ಸಂಸ್ಥೆಯು ‘ರಂಗ ಚೈತನ್ಯ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ. ಅವರ ಬಗ್ಗೆ ಕೇವಲ ಅನುಕಂಪ ತೋರುವುದಕ್ಕಿಂತ ಇಂತಹ ಕಾರ್ಯಕ್ರಮಗಳ ಮೂಲಕ ಸಂತಸದ ಕ್ಷಣಗಳನ್ನು ನೀಡುವುದು ಹೆಚ್ಚು ಅರ್ಥಪೂರ್ಣ ಎಂದರು.
ಸುಮನಸಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಜನಾರ್ದನ ಕೊಡವೂರು, ಲೇಖಕಿ ಪೂರ್ಣಿಮಾ ಜನಾರ್ದನ, ಸುಮನಸಾ ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲ್, ಕಾರ್ಯಕ್ರಮ ಸಂಯೋಜಕರಾದ ವಿಜಯಾ ಭಾಸ್ಕರ್, ಗೀತಾ ಹರೀಶ್, ವಿಶೇಷ ಆಹ್ವಾನಿತರಾದ ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಶೆಟ್ಟಿ, ಉಪ್ಪೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುನಿಲ್ ಶೆಟ್ಟಿ ಹಾಗೂ ಸಾಮಾಜಿಕ ಕಾರ್ಯಕರ್ತ ಸುಂದರ ಪೂಜಾರಿ ಕೊಳಲಗಿರಿ ಉಪಸ್ಥಿತರಿದ್ದರು.
ಸೌಭಾಗ್ಯಲಕ್ಷ್ಮಿ ತಂತ್ರಿ ಪ್ರಾರ್ಥಿಸಿದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು. ಸುಮನಸಾ ತಂಡದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
.jpeg)
.jpeg)