Florida: WWE ಐಕಾನಿಕ್ ಸೂಪರ್‌ಸ್ಟಾರ್ ಹಲ್ಕ್ ಹೊಗನ್ ನಿಧನ; ಡೊನಾಲ್ಡ್ ಟ್ರಂಪ್ ಸಂತಾಪ

Florida: WWE ಐಕಾನಿಕ್ ಸೂಪರ್‌ಸ್ಟಾರ್ ಹಲ್ಕ್ ಹೊಗನ್ ನಿಧನ; ಡೊನಾಲ್ಡ್ ಟ್ರಂಪ್ ಸಂತಾಪ


WWE ದಂತಕಥೆ ಮತ್ತು ಐಕಾನಿಕ್ ಸೂಪರ್‌ಸ್ಟಾರ್ ಹಲ್ಕ್ ಹೊಗನ್ ನಿಧನರಾಗಿದ್ದಾರೆ. ಫ್ಲೋರಿಡಾದಲ್ಲಿ ವಾಸಿಸುತ್ತಿದ್ದ ಲೆಜೆಂಡರಿ ಕುಸ್ತಿಪಟು ಹೃದಯಾಘಾತಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ್ದಾರೆ. 71 ವರ್ಷದ ಹೊಗನ್ ತೀವ್ರ ಅಸ್ವಸ್ಥರಾಗಿದ್ದ ವಿಷಯ ತಿಳಿದು ಸ್ಥಳಕ್ಕಾಗಮಿಸಿದ್ದ ವೈದ್ಯರ ತಂಡ ಪರೀಕ್ಷೆ ನಡೆಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆಗೆ ಸ್ಪಂಧಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.


ಹಲ್ಕ್ ಹೋಗನ್ ಅವರ ನಿಜವಾದ ಹೆಸರು ಟೆರ್ರಿ ಜಿ. ಬೋಲಿಯಾ. ಇವರು ಆಗಸ್ಟ್ 11, 1953 ರಂದು ಅಮೆರಿಕದ ಜಾರ್ಜಿಯಾದಲ್ಲಿ ಜನಿಸಿದ್ದರು. ಇವರು WWE ಮೂಲಕ ಹೆಚ್ಚಿನ ಖ್ಯಾತಿ ಪಡೆದುಕೊಂಡಿದ್ದರು. ದೈತ್ಯಾಕಾರದ ದೇಹವದ ಹಲ್ಕ್ 1980 ಮತ್ತು 90ರ ದಶಕಗಳಲ್ಲಿ ಅತ್ಯಂತ ಜನಪ್ರಿಯರಲ್ಲಿ ಒಬ್ಬರಾಗಿದ್ದರು. ತಮ್ಮ ವಿಶಿಷ್ಟ ಶೈಲಿಯ ಕುಸ್ತಿಯಿಂದಲೇ ಪ್ರೇಕ್ಷಕರನ್ನು ಆಕರ್ಷಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ ಒಟ್ಟು 6 ಬಾರಿ WWE ನಲ್ಲಿ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದ್ದಾರೆ.

ಕೆಲವು ವಾರಗಳ ಹಿಂದೆ, ಅವರು ಕೋಮಾದಲ್ಲಿದ್ದರು ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆದರೆ ಪತ್ನಿ ಸ್ಕೈ ಡೈಲಿ ಈ ಸುದ್ದಿಯನ್ನು ತಳ್ಳಿಹಾಕಿದ್ದರು. ಇತ್ತೀಚಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹಲ್ಕ್​ ಆರೋಗ್ಯಯುತವಾಗಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು.


ಕಳೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ಬೆಂಬಲ ಘೋಷಿಸಿದ್ದ ಹೊಗನ್ ಪ್ರಚಾರದಲ್ಲೂ ಭಾಗವಹಿಸಿದ್ದರು. ಕಾರ್ಯಕ್ರಮವೊಂದರಲ್ಲಿ, ಅವರು ತಮ್ಮ  ಟಿ-ಶರ್ಟ್ ಹರಿದುಕೊಂಡು ಭಾವೋದ್ರಿಕ್ತ ಭಾಷಣ ಮಾಡಿ ನೆರೆದಿದ್ದ ಎಲ್ಲರನ್ನೂ ಆಕರ್ಷಿಸಿದ್ದರು. ಹಲ್ಕ್​ ಭಾಷಣ ಮೆಚ್ಚಿದ ಟ್ರಂಪ್ ಎಲ್ಲಾ ಸದಸ್ಯರೊಂದಿಗೆ ಸೇರಿ ಹೊಗನ್​ ಅವರನ್ನು ಅಭಿನಂದಿಸಿದ್ದರು.

ಹಲ್ಕ್ ಹೊಗನ್ ಅವರ ನಿಧನಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂತಾಪ ಸೂಚಿಸಿದ್ದಾರೆ. ಒಬ್ಬ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಹೊಗನ್ ಅವರ ಹೃದಯ ವಿಶಾಲವಾಗಿತ್ತು ಎಂದು ಹೇಳಿದ ಟ್ರಂಪ್ ಸಂತಾಪ ಸೂಚಿಸಿದ್ದಾರೆ.






Ads on article

Advertise in articles 1

advertising articles 2

Advertise under the article