
Udupi: ಮಹಿಷಮರ್ಧಿನಿಯ ಸನ್ನಿಧಿಯಲ್ಲಿ ಕಳ್ಳತನಕ್ಕೆ ಯತ್ನ; ಮೂರ್ಛೆ ತಪ್ಪಿ ಸಿಕ್ಕಿಬಿದ್ದ ಕಳ್ಳ
26/07/2025
ಉಡುಪಿಯ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಕಳ್ಳರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಜುಲೈ 25ರ ತಡರಾತ್ರಿ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಇಬ್ಬರು ಕಳ್ಳರು ದೇವಸ್ಥಾನದ ಹೆಬ್ಬಾಗಿಲು ಮುರಿದು ಒಳ ಹೊಕ್ಕಿದ್ದಾರೆ. ಕಳ್ಳರ ಕೃತ್ಯವನ್ನು ಗಮನಿಸಿದ ಕಾವಲುಗಾರ ಬೊಬ್ಬೆ ಹಾಕಿದ್ದು, ಕಾವಲುಗಾರನಿಗೆ ಚಾಕು ತೋರಿಸಿ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಸ್ಥಳೀಯರು ಹಾಗೂ ಭಕ್ತರು ದೇವಸ್ಥಾನದ ವಠಾರದಲ್ಲಿ ಸೇರಿ ಕಳ್ಳರಿಗಾಗಿ ಹುಡುಕಾಟ ಶುರು ಮಾಡಿದ್ದಾರೆ. ಸಿಸಿಟಿವಿ ಪರಿಶೀಲಿಸಿದಾಗ ಕಳ್ಳರು ಕಡಿಯಾಳಿ ಪೆಟ್ರೋಲ್ ಬಂಕ್ ಕಡೆ ತೆರಳಿರುವುದು ಗೊತ್ತಾಗಿದೆ.
ಪೆಟ್ರೋಲ್ ಬಂಕ್ ಬಳಿ ಇಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಹಿಡಿದಿದ್ದಾರೆ. ಈ ವೇಳೆ ಓರ್ವ ಕಳ್ಳನಿಗೆ ಮೂರ್ಛೆ ರೋಗವಿದ್ದು, ಅಲ್ಲೇ ಮೂರ್ಛೆ ಹೋಗಿದ್ದಾನೆ. ಆತನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕಾರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೋರ್ವ ಕಳ್ಳನನ್ನು ಸ್ಥಳೀಯರು ಉಡುಪಿ ನಗರ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳರು ಕೇರಳ ಮೂಲದವರೆಂದು ತಿಳಿದು ಬಂದಿದೆ. ಉಡುಪಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ದೃಷ್ಟಿಯಿಂದ ಕಳ್ಳರ ಮಾಹಿತಿಯನ್ನು ಪೊಲೀಸರು ತಿಳಿಸಿಲ್ಲ.