Udupiದಟ್ಟ ಕಾನನದಲ್ಲಿ ಜಲಲ ಜಲ ಧಾರೆ;ಸೊಬಗ ಸವಿಯಲು ಪ್ರವಾಸಿಗರ ದಂಡು

Udupiದಟ್ಟ ಕಾನನದಲ್ಲಿ ಜಲಲ ಜಲ ಧಾರೆ;ಸೊಬಗ ಸವಿಯಲು ಪ್ರವಾಸಿಗರ ದಂಡು


ಮಳೆಗಾಲ ಪ್ರಾರಂಭವಾಯಿತೆ0ದರೆ ಸಾಕು ಸಾಮಾನ್ಯವಾಗಿ ಮಲೆನಾಡು ಹಾಗೂ ಕರಾವಳಿಯಲ್ಲಿ ಹಲವಾರು ರೀತಿಯ ಜಲಪಾತಗಳು ಮೈದುಂಬಿ ಹರಿಯುತ್ತದೆ. ಕಲವೊಂದು ಕಡೆಗಳಲ್ಲಿ ನೀರ ಹರಿವು ಜಲಪಾತವಾಗಿ ಚಿಮ್ಮುತ್ತದೆ. ನೀರ ಒಸರು, ಪುಟ್ಟ ಪುಟ್ಟ ತೊರೆಗಳು ಜಲಪಾತವಾಗಿ ಹರಿದು ತನ್ನತ್ತ ಸೆಳೆಯುವ ತಾಣಗಳಲ್ಲಿ ಮಣಿಪಾಲದ ಅರ್ಬಿ ಜಲಪಾತವೂ ಒಂದು. ದಟ್ಟ ಕಾನನದ ನಡುವೆ ಇಳಿಜಾರಿನಲ್ಲಿ ಮೈದುಂಬಿ ಹರಿಯುತ್ತಿರುವ

ಅರ್ಬಿ ಜಲಪಾತವನ್ನು ನೋಡುವುದೇ ಕಣ್ಣುಗಳಿಗೆ ಸೊಗಸು. ಅದರಲ್ಲೂ ತಳುಕುತ್ತಾ ಬಳುಕುತ್ತಾ ಕಲ್ಲಿನಿಂದ ಕಲ್ಲಿಗೆ ಹಂತ ಹಂತವಾಗಿ ಹರಿಯುವಾಗ ಹಾಲ್ನೊರೆ ಜಲಪಾತ ಕಣ್ಗಳಿಗೆ ಹಬ್ಬನ್ನುಂಟು ಮಾಡುತ್ತದೆ. ಮಳೆಗಾಲದಲ್ಲಿ ಹಲವಾರು ಕವಲುಗಳಾಗಿ ಶುಭ್ರ ನೀರಿನಿಂದ ಹರಿಯುವ ಅರ್ಬಿ ಜಲಪಾತವನ್ನು ನೋಡಲು ಪ್ರವಾಸಿಗರ ದಂಡೇ ಬರುತ್ತದೆ. ಯಾವುದೇ ಅಪಾಯವಿಲ್ಲದೆ ಸಮಾನಾಂತರವಾಗಿ ಈ ನೀರು ಹರಿಯುವುದರಿಂದ ಅಪಾಯದ ಭೀತಿ ಇಲ್ಲ. ಆದರೆ ಕಲ್ಲುಗಳು ಜಾರುತ್ತಿರುವುದರಿಂದ ಕೊಂಚ ಜಾಗ್ರತೆ ವಹಿಸುವುದು ಒಳಿತು.


ಅರ್ಬಿ ಜಲಪಾತ ಇರುವುದು ಉಡುಪಿ ಜಿಲ್ಲೆಯ 80ನೇ ಬಡಗಬೆಟ್ಟು ಗ್ರಾಮದ ಅರ್ಬಿ ಕೋಡಿ ಎಂಬಲ್ಲಿ ಮಣಿಪಾಲದಿಂದ ಅಲೆವೂರು ಮಾರ್ಗವಾಗಿ 3 ಕಿಮೀ ಸಾಗಿದರೆ ದಶರಥ ಎಂಬ ಊರು ಸಿಗುತ್ತದೆ. ಅಲ್ಲಿಂದ ಪೂರ್ವಾಭಿಮುಖವಾಗಿ ವೈಷ್ಣವಿ ದುರ್ಗಾ ದೇವಸ್ಥಾನದ ಮಾರ್ಗವಾಗಿ ಒಂದು ಕಿಲೋ ಮೀಟರ್ ಸಾಗಿದರೆ ದೇವಸ್ಥಾನದ ಪಕ್ಕದಲ್ಲೇ ಅರ್ಬಿ ಜಲಪಾತ ನಮ್ಮನ್ನು ಕೈಬೀಸಿ ಕರೆಯುತ್ತದೆ. ಮಣಿಪಾಲ ಮಹಾನಗರದಲ್ಲಿ ಜನಸಂಚಾರದಿ0ದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ಕೆಲಕಾಲ ಕಳೆಯುವುದಕ್ಕೆ ಈ ಜಲಪಾತ ಯೋಗ್ಯ ಸ್ಥಳ.ಸದಾ ಕೆಲಸದ ಜಂಜಾಟದಿ0ದ ಕೂಡಿರುವ ಮನಸ್ಸುಗಳಿಗೆ ನಿಸರ್ಗದ ನಡುವಿರುವ ಜಲಧಾರೆ ಮನಸ್ಸಿಗೆ ಮುದ ನೀಡುವುದರಲ್ಲಿ ಎರಡು ಮಾತಿಲ್ಲ. 

ಮೇ ಅಥವಾ ಜೂನ್‌ನಲ್ಲಿ ಮಳೆಗಾಲ ಆರಂಭವಾಗುತ್ತಿದ್ದ0ತೆ ಹುಟ್ಟಿಕೊಳ್ಳುವ ಈ ಜಲಪಾತವು ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಮಳೆ ಕಡಿಮೆಯಾಗುತ್ತಿದ್ದಂತೆ ಕಣ್ಮರೆಯಾಗುತ್ತದೆ. ಆದರೆ ಜನವರಿವರೆಗೂ ಸಣ್ಣ ತೊರೆಯಲ್ಲಿ ನೀರು ಹರಿಯುತ್ತಿರುತ್ತದೆ. ಜೂನ್‌ನಿಂದ ಅಕ್ಟೋಬರ್ ತಿಂಗಳು ಪ್ರವಾಸಿಗರು ಇಲ್ಲಿಗೆ ಆಗಮಿಸಲು ಸೂಕ್ತ ಸಮಯವಾಗಿದೆ. ಶನಿವಾರ ಹಾಗೂ ರವಿವಾರ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಮೋಜು ಮಸ್ತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಉಡುಪಿ ಮಾತ್ರವಲ್ಲದೇ ಬೇರೆ ಬೇರೆ ಕಡೆಗಳಿಂದಲೂ ಕುಟುಂಬ ಸಮೇತರಾಗಿ ಈ ಜಲಪಾತದ ವೀಕ್ಷಣೆಗೆ ಬರುತ್ತಿದ್ದಾರೆ. 

ಒಟ್ಟಿನಲ್ಲಿ ದಿನ ನಿತ್ಯದ ಜಂಜಾಟದಿ0ದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ಕೆಲಕಾಲ ಸಂಭ್ರಮಿಸುವುದಕ್ಕೆ ಈ ಜಲಪಾತ ಯೋಗ್ಯ ಸ್ಥಳ. ಸದಾ ಕೆಲಸದ ಜಂಜಾಟದಿ0ದ ಕೂಡಿರುವ ಮನಸ್ಸುಗಳಿಗೆ ನಿಸರ್ಗದ ನಡುವಿರುವ ಜಲಧಾರೆ ಮನಸ್ಸಿಗೆ ಮುದ ನೀಡುವುದರಲ್ಲಿ ಎರಡು ಮಾತಿಲ್ಲ. ಮಳೆ ಬಂದಾಗ ಮಾತ್ರ ಮೂಡಿಕೊಳ್ಳುವ ಮಣಿಪಾಲದ ಅರ್ಬಿ ಜಲಪಾತ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.






Ads on article

Advertise in articles 1

advertising articles 2

Advertise under the article