
Gangolli: ಪೊಲೀಸ್ ಸಿಬ್ಬಂದಿ ಮೃತ್ಯು;ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ
18/07/2025 05:29 AM
ಹೃದಯಾಘಾತದಿಂದ ಮೃತಪಟ್ಟ ಗಂಗೊಳ್ಳಿ ಠಾಣಾ ಹೆಡ್ ಕಾನ್ಸ್ಟೇಬಲ್ ರಾಮಚಂದ್ರ ಅವರ ಅಂತ್ಯ ಸಂಸ್ಕಾರ ಬೈಂದೂರಿನ ತಮ್ಮ ನಿವಾಸದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಪೊಲೀಸರು ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ, ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸಿದ್ರು.
ಅನಾರೋಗ್ಯದ ಕಾರಣದಿಂದ ರಾಮಚಂದ್ರ(48) ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 17ರಂದು ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಜುಲೈ 18ರಂದು ತಮ್ಮ ಬೈಂದೂರಿನ ನಿವಾಸಕ್ಕೆ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗಿತ್ತು. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್ ಭೇಟಿ ನೀಡಿ, ರಾಮಚಂದ್ರ ಅವರ ಮಗ ಹಾಗೂ ಕುಟುಂಬಿಕರಿಗೆ ಧೈರ್ಯ ತುಂಬಿದರು. ಬೈಂದೂರು ಪಡುವರಿ ಗ್ರಾಮದ ಸೆಳ್ಳೆಕುಳ್ಳಿ ಮೂಲದ ರಾಮಚಂದ್ರ ಅವರು ಹಿರಿಯಡ್ಕ, ಮಣಿಪಾಲ ಹಾಗೂ ಅಮಾಸೆಬೈಲು ಪೊಲೀಸ್ ಠಾಣೆಗಳಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಸೇವೆ ಸಲ್ಲಿಸಿದ್ದು, ಗಂಗೊಳ್ಳಿ ಠಾಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಸದ್ಯದಲ್ಲೇ ಸಹಾಯಕ ನಿರೀಕ್ಷಕರಾಗಿ ಭಡ್ತಿ ಹೊಂದುವ ಪಟ್ಟಿಯಲ್ಲಿದ್ದರು ಎಂದು ತಿಳಿದು ಬಂದಿದೆ. ಮೃತ ರಾಮಚಂದ್ರ ಅವರ ಕಣ್ಣುಗಳನ್ನು ಕುಟುಂಬಿಕರು ದಾನ ಮಾಡಿದ್ದಾರೆ.