
Mangalore:ರಾಜ್ಯದ ಮೊದಲ ಸಮುದ್ರ ಆಂಬ್ಯುಲೆನ್ಸ್ ಕನಸು ಮುಂದಿನ ವರ್ಷ ಸಾಕಾರ
14/07/2025 03:51 PM
ಹಲವು ವರ್ಷಗಳ ಕನಸಾಗಿದ್ದ ಬಹುನಿರೀಕ್ಷಿತ ರಾಜ್ಯದ ಮೊದಲ ಸಮುದ್ರ ಆಂಬ್ಯುಲೆನ್ಸ್ ಮುಂದಿನ ವರ್ಷ ಸಾಕಾರಗೊಳ್ಳಲಿದೆ. ಮೀನುಗಾರಿಕೆ ಇಲಾಖೆಯು ಸುಮಾರು ೭.೮೫ ಕೋಟಿ ರೂ. ಮೊತ್ತದ ಸಮುದ್ರ ಆಂಬ್ಯುಲೆನ್ಸ್ ಸಿದ್ಧಪಡಿಸಲಿದೆ. ಮೀನುಗಾರ ಸಮುದಾಯದ ಬೇಡಿಕೆಗೆ ಪೂರಕವಾಗಿ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಮುಂದಿನ ವಾರ ನಿರ್ಮಾಣ ಕಾರ್ಯಾದೇಶ ನೀಡಲಿದೆ. ಇದಾದ ಸುಮಾರು ಏಳು ತಿಂಗಳಲ್ಲಿ ಆ0ಬ್ಯುಲೆನ್ಸ್ ಸಿದ್ಧಗೊಳ್ಳಲಿದೆ ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೆರ್ ತಿಳಿಸಿದ್ದಾರೆ.
೮೦೦ ಎಚ್‌ಪಿ ಎಂಜಿನ್ ಸಾಮರ್ಥ್ಯದ ಆಂಬ್ಯುಲೆನ್ಸ್ನಲ್ಲಿ ನಾಲ್ಕು ಮಂದಿ ಅರೆವೈದ್ಯಕೀಯ ಸಿಬ್ಬಂದಿ ಮತ್ತು ೪-೫ ಹಾಸಿಗೆಗಳು ಇರಲಿವೆ. ಆಕ್ಸಿಜನ್ ಘಟಕ, ರೆಫ್ರಿಜರೇಟರ್, ಸ್ಟ್ರೆಚರ್, ಶವಾಗಾರ ವ್ಯವಸ್ಥೆ ಇರಲಿದೆ. ಮೀನುಗಾರಿಕೆ ಮಾಡುತ್ತಿರುವಾಗ ಸಮುದ್ರದಲ್ಲಿ ತೊಂದರೆಗೆ ಸಿಲುಕುವ ಮೀನುಗಾರರ ರಕ್ಷಣೆಗೆ ಆಂಬ್ಯುಲೆನ್ಸ್ ತುರ್ತು ವೈದ್ಯಕೀಯ ನೆರವು ನೀಡಲಿದೆ.ವೈದ್ಯಕೀಯ ಉಪಕರಣಗಳ ಜತೆಗೆ, ಆಂಬ್ಯುಲೆನ್ಸ್ನಲ್ಲಿ ಬೆಂಕಿ ನಂದಕ ಸಾಧನಗಳು, ಅಗ್ನಿಶಾಮಕ ವ್ಯವಸ್ಥೆ, ೨೦ ಲೈಫ್ ಜಾಕೆಟ್‌ಗಳು, ಜೀವ ರಕ್ಷಕ ಉಪಕರಣಗಳು, ಎರಡು ರಾಫ್ಟ್ಗಳು ಸಹಿತ ಅಗತ್ಯ ಉಪಕರಣಗಳ ವ್ಯವಸ್ಥೆ ಮಾಡಲಾಗುತ್ತದೆ.ಸಾಮಾನ್ಯವಾಗಿ ಆಳಸಮುದ್ರ ಮೀನುಗಾರಿಕೆ ಬೋಟ್‌ಗಳಿಗೆ ೩೫೦ರಿಂದ ೪೦೦ ಎಚ್‌ಪಿ ಎಂಜಿನ್ ಅಳವಡಿಸಲಾಗುತ್ತದೆ. ಅದಕ್ಕೆ ಹೋಲಿಸಿದರೆ ಇದರ ಸಾಮರ್ಥ್ಯ ಕಡಿಮೆ. ಆದರೆ ತುರ್ತು ಸಂದರ್ಭದಲ್ಲಿ ನೆರವು ನೀಡಿ, ಮುಂದೆ ದಡಕ್ಕೆ ತಂದು ಹೆಚ್ಚಿನ ಚಿಕಿತ್ಸೆಗೆ ಆಂಬ್ಯುಲೆನ್ಸ್ ಅನುಕೂಲ ಕಲ್ಪಿಸಲಿದ್ದು, ೨೦೨೬ರ ಮೀನುಗಾರಿಕೆ ಋತುವಿಗೆ ಬಳಕೆಗೆ ಬರುವ ನಿರೀಕ್ಷೆ ಇದೆ. ಸಿದ್ಧಗೊಂಡ ಬಳಿಕ ದೊಡ್ಡ ಬಂದರು ಮಲ್ಪೆ ಅಥವಾ ಹೆಚ್ಚು ಬೋಟ್‌ಗಳು ಕಾರ್ಯಾಚರಿಸುವ ಮಂಗಳೂರಿನಲ್ಲಿದ್ದು, ತುರ್ತು ಕರೆ ವೇಳೆ ಧಾವಿಸಲಿದೆ. ವಿದೇಶಗಳಲ್ಲಿ ಸಾಕಷ್ಟು ಸಮುದ್ರ ಆಂಬ್ಯುಲೆನ್ಸ್ಗಳು ಮೀನುಗಾರರ, ಪ್ರವಾಸಿಗರ ರಕ್ಷಣೆಗೆ ಕಾರ್ಯಾಚರಿಸುತ್ತಿವೆ. ಭಾರತವು ಮಾಲ್ಡಿವ್ಸ್ಗೆ ಎರಡು ಸಮುದ್ರ ಆಂಬ್ಯುಲೆನ್ಸ್ಗಳನ್ನು ೨೦೨೩ರಲ್ಲಿ ನೀಡಿತ್ತು. ಕೇರಳ ರಾಜ್ಯದಲ್ಲಿ ಈಗಾಗಲೇ ಮೂರು ಸಮುದ್ರ ಆಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದ ತಂಡವು ಅಲ್ಲಿಗೆ ಹೋಗಿ ಅಧ್ಯಯನ ನಡೆಸಿದ ಬಳಿಕ ರಾಜ್ಯದಲ್ಲೂ ಅದೇ ಮಾದರಿ ಹಾಗೂ ಹೊಸ ತಂತ್ರಜ್ಞಾನ ಬಳಸಿಕೊಂಡು ಆಂಬ್ಯುಲೆನ್ಸ್ ಸಿದ್ಧಪಡಿಸಲಿದೆ. ಜಿಪಿಎಸ್ ಮೂಲಕ ಸುಲಭವಾಗಿ ಬೋಟ್‌ಗಳ ಹುಡುಕಾಟ ವ್ಯವಸ್ಥೆ ಕೂಡ ಮಾಡಲಿದೆ.
ಬಜೆಟ್‌ನಲ್ಲಿ ಘೋಷಣೆ:
೨೦೨೪-೨೫ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮೊದಲ ಸಮುದ್ರ ಆಂಬ್ಯುಲೆನ್ಸ್ ಸೇವೆ ಪರಿಚಯಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಅದರಂತೆ ರಾಜ್ಯದ ಮೊದಲ ಸಮುದ್ರ ಆಂಬ್ಯುಲೆನ್ಸ್ಗೆ ಮುಂದಿನ ವಾರ ಕಾರ್ಯಾದೇಶ ನೀಡಲಿದ್ದು, ೭.೮೫ ಕೋಟಿ ರೂ. ಮೊತ್ತದಲ್ಲಿ ೮೦೦ ಎಚ್‌ಪಿ ಎಂಜಿನ್ ಸಾಮರ್ಥ್ಯದ ಸರ್ವಸುಸಜ್ಜಿತ ಆಂಬ್ಯುಲೆನ್ಸ್ ಏಳು ತಿಂಗಳಲ್ಲಿ ಸಿದ್ಧಗೊಂಡು ಮುಂದಿನ ಮೀನುಗಾರಿಕೆ ಋತುವಿನಲ್ಲಿ ಕಾರ್ಯಾಚರಿಸುವ ನಿರೀಕ್ಷೆ ಇದೆ.