
Udupi: ಗೂಂಡಾ ಕಾಯ್ದೆಯಡಿ ಗರುಡ ಗ್ಯಾಂಗ್ ಸದಸ್ಯನ ಬಂಧನ
11/07/2025 05:30 AM
ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆದೇಶದಂತೆ ಗೂಂಡಾ ಕಾಯ್ದೆ ಅಡಿ ಕಾರ್ಕಳದ ಕಂಪನ ಕೌಡೂರು ಗ್ರಾಮದ ಕಬೀರ್ ಅಲಿಯಾಸ್ ಕಬೀರ್ ಹುಸೇನ್(46) ಎಂಬಾತನನ್ನು ಬಂಧಿಸಲಾಗಿದೆ. ಈತನನ್ನು ಪೊಲೀಸರು ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹಕ್ಕೆ ಸೇರಿಸಿದ್ದಾರೆ. ಕುಖ್ಯಾತ ಗರುಡ ಗ್ಯಾಂಗ್‌ನ ಸಕ್ರೀಯ ಸದಸ್ಯನಾಗಿದ್ದ ಕಬೀರ್, 2005 ರಿಂದ ಇಲ್ಲಿಯ ತನಕ ಕೊಲೆ ಯತ್ನ, ದರೋಡೆ, ಸುಲಿಗೆ, ಕಳ್ಳತನ, ಜಾನುವಾರು ಕಳವು, ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮುಂತಾದ 17 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಇವುಗಳ ಪೈಕಿ ಈಗಾಗಲೇ ಎರಡು ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿದ್ದು, 8 ಪ್ರಕರಣಗಳಲ್ಲಿ ಖುಲಾಸೆ ಹೊಂದಿದ್ದಾನೆ. ಮೂರು ಪ್ರಕರಣಗಳಲ್ಲಿ ರಾಜಿ ಮಾಡಿಕೊಂಡಿದ್ದು, ಎರಡು ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿವೆ. ಉಳಿದ ಎರಡು ಪ್ರಕರಣಗಳು ಪೊಲೀಸ್ ತನಿಖೆಯಲ್ಲಿವೆ ಎಂದು ತಿಳಿದು ಬಂದಿದೆ.