New Delhi: ಫಿಡೆ ಮಹಿಳಾ ವಿಶ್ವಕಪ್ ಫೈನಲ್: ಐತಿಹಾಸಿಕ ಚಾಂಪಿಯನ್ ಪಟ್ಟಕ್ಕಾಗಿ ಕೊನೆರು ಹಂಪಿಗೆ ದಿವ್ಯಾ ದೇಶ್‌ಮುಖ್ ಸವಾಲು
25/07/2025
ಬಟುಮಿ(ಜಾರ್ಜಿಯಾ)ಯಲ್ಲಿ ನಡೆಯುತ್ತಿರುವ ಫಿಡೆ ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಗ್ರ‍್ಯಾಂಡ್‌ಮಾಸ್ಟರ್ ಕೊನೆರು ಹಂಪಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಈ ಬಾರಿ ಇಬ್ಬರು ಭಾರತೀಯರು ಮುಖಾಮುಖಿಯಾಗಲಿದ್ದಾರೆ.
ಕೊನೆರು ಹಂಪಿ ಹಾಗೂ ಅಗ್ರ ಶ್ರೇಯಾಂಕಿತೆ ಚೀನಾದ ಟಿಂಗ್‌ಜೀ ಲೀ ನಡುವಿನ ಸೆಮಿಫೈನಲ್‌ನ 2 ಗೇಮ್ ಕೂಡಾ ಡ್ರಾಗೊಂಡಿದ್ದವು. ಹೀಗಾಗಿ ಫಲಿತಾಂಶ ನಿರ್ಧರಿಸಲು ಗುರುವಾರ ಟೈ ಬ್ರೇಕರ್ ನಡೆಸಲಾಯಿತು. ಟೈ ಬ್ರೇಕರ್‌ನ ತಲಾ 15 ನಿಮಿಷಗಳ ಪಂದ್ಯದಲ್ಲಿ 1-1 ಡ್ರಾ ಆಯಿತು. ಬಳಿಕ 10 ನಿಮಿಷಗಳ ಪಂದ್ಯವೂ ಸಮಬಲಗೊಂಡಿತು. ನಂತರ ನಡೆದ ಮತ್ತೊಂದು ಸುತ್ತಿನ ಟೈ ಬ್ರೇಕರ್‌ನಲ್ಲಿ ಗೆದ್ದು ಕೊನೆರು ಫೈನಲ್‌ಗೇರಿದರು. ಇದರೊಂದಿಗೆ 2026ರ ಕ್ಯಾಂಡಿಡೇಟ್ಸ್ಗೆ ಅರ್ಹತೆ ಪಡೆದಿದ್ದಾರೆ.
ಜು.26, 27ರಂದು ನಡೆಯಲಿರುವ ಟೂರ್ನಿಯ ಫೈನಲ್‌ನಲ್ಲಿ ಕೊನೆರು ಹಂಪಿಗೆ ಅಂತಾರಾಷ್ಟ್ರೀಯ ಮಾಸ್ಟರ್ ದಿವ್ಯಾ ದೇಶ್‌ಮುಖ್ ಸವಾಲು ಎದುರಾಗಲಿದೆ. ಪಂದ್ಯ ಡ್ರಾ ಆದರೆ ಜು.28ರಂದು ಟೈ ಬ್ರೇಕರ್ ನಡೆಯಲಿದೆ. ಭಾರತದ 19 ವರ್ಷದ ದಿವ್ಯಾ ಗುರುವಾರ ಸೆಮಿಫೈನಲ್‌ನಲ್ಲಿ ಚೀನಾದ ಝಾಂಗ್‌ಯೀ ಟಾನ್ ವಿರುದ್ಧ ಗೆದ್ದಿದ್ದರು. ಈ ಮೂಲಕ ಮಹಿಳಾ ಚೆಸ್ ವಿಶ್ವಕಪ್‌ನ ಫೈನಲ್‌ಗೇರಿದ ಭಾರತದ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.