Udupi: ಮಾದಕ ದ್ರವ್ಯ ವಿರೋಧಿ ಸಭೆ; ವಾರದೊಳಗೆ ಶಿಕ್ಷಣ ಸಂಸ್ಥೆಗಳಲ್ಲಿ ಸಮಿತಿ ರಚನೆಗೆ ಎಸ್ಪಿ ಸೂಚನೆ
24/07/2025
ಉಡುಪಿ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ದ್ರವ್ಯ ವಿರೋಧಿ ಮತ್ತು ಜಾಗೃತಿ ಸಮಿತಿಯನ್ನು ಒಂದು ವಾರದ ಒಳಗಡೆ ರಚಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಂ ಶಂಕರ್ ಅವರು ಸೂಚಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಉಡುಪಿಯ ಬನ್ನಂಜೆ ನಾರಾಯಣ ಗುರು ಸಭಾಂಗಣದಲ್ಲಿ ಮಾದಕ ದ್ರವ್ಯ ವಿರೋಧಿ ಮತ್ತು ಜಾಗೃತಿ ಸಮಿತಿ ರಚಿಸುವ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ದ್ರವ್ಯ ವಿರೋಧಿ ಮತ್ತು ಜಾಗೃತಿ ಸಮಿತಿಗೆ ಆಯಾ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣಾಧಿಕಾರಿಗಳು ನೋಡೆಲ್ ಅಧಿಕಾರಿಗಳಾಗಿರುತ್ತಾರೆ. ಪ್ರತೀ ತಿಂಗಳು ಒಂದು ಬಾರಿ ಸಮಿತಿಯ ಸಭೆ ನಡೆಸಬೇಕು. ಸಭೆಯ ಮಾಹಿತಿಯನ್ನು ಸ್ಥಳೀಯ ಠಾಣೆಗೆ ತಿಳಿಸಿ, ಸಭೆಯಲ್ಲಿ ಯಾರಾದರೂ ಒಬ್ಬರು ಪೊಲೀಸ್ ಸಿಬ್ಬಂದಿಗೆ ಭಾಗವಹಿಸಬೇಕು. ಪ್ರತೀ ಮೂರು ತಿಂಗಳಿಗೊಮ್ಮೆ ಸಭೆಗೆ ನೋಡಲ್ ಅಧಿಕಾರಿಯನ್ನು ಆಹ್ವಾನಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಎಎಸ್ಪಿ ಸುಧಾಕರ್ ನಾಯ್ಕ್, ಡಿವೈಎಸ್ಪಿ ಡಿ.ಟಿ. ಪ್ರಭು, ಕಾರ್ಕಳ ವಿಭಾಗದ ಎಎಸ್ಪಿ ಡಾ. ಹರ್ಷ ಪ್ರಿಯಂವದಾ, ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ವರ್ಗೀಸ್ ಉಪಸ್ಥಿತರಿದ್ದರು. ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಭಾಗವಹಿಸಿದ್ದರು.