Kaup: ಅಗ್ನಿ ದುರಂತ; ಮೃತರ ಕುಟುಂಬಸ್ಥರಿಗೆ ಸಿಎಂ ಪರಿಹಾರ ಮಂಜೂರು
24/07/2025
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಮನವಿಗೆ ಸ್ಪಂದಿಸಿದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲ್ಲಾರು ಪಕೀರಣ ಕಟ್ಟೆ ಗುಡ್ಡೆಗೇರಿ ಸಲಫಿ ಮಸೀದಿ ಬಳಿ ಗುಜರಿ ಅಂಗಡಿ ಮತ್ತು ಗೋದಾಮಿನಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಮಂಜೂರು ಮಾಡಿದ್ದಾರೆ.
2022ರ ಮಾರ್ಚ್ ತಿಂಗಳ 23 ರಂದು ಸಂಭವಿಸಿದ ಘಟನೆಯಲ್ಲಿ ರಜಬ್ ಬ್ಯಾರಿ, ರಜಬ್ ಆಲಿ, ನಯಾಜ್ ಎಂಬ ಯುವಕರು ಮೃತಪಟ್ಟಿದ್ದರು.
"ಈ ಮೂವರ ಮರಣವು ಕುಟುಂಬಕ್ಕೆ ಆಘಾತವಾಗಿದ್ದು, ಸರ್ಕಾರದಿಂದ ಪರಿಹಾರ ಧನವನ್ನು ಒದಗಿಸಿಕೊಡಬೇಕುʼ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಮನವಿ ಮಾಡಿದ್ದರು.
ಮೃತರ ಕುಟುಂಬಸ್ಥರ ಮನವಿಗೆ ಸ್ಪಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಮೊತ್ತವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.