ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ವಂಚನೆ; ಮಹಿಳೆಯ ಬಂಧನ
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಮೂಲಕ ಕೋಟ್ಯಾಂತರ ರೂಪಾಯಿ ಸಾಲಕೊಡಿಸುವುದಾಗಿ ನಂಬಿಸಿ ಹಲವರಿಗೆ ವಂಚಿಸಿರುವ ಮಹಿಳೆಯೊಬ್ಬಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಾವರದ ಕೌಶಲ್ಯ ಬಂಧಿತ ಮಹಿಳೆ. ಬ್ರಹ್ಮಾವರ ತಾಲೂಕಿನ ಯಡ್ತಾಡಿ ಗ್ರಾಮದ ಬಾರಕೂರು ಹೇರಾಡಿ ನಿವಾಸಿ ಸರಿತಾ ಲೂಯಿಸ್ ಎಂಬವರು ನೀಡಿದ ದೂರಿನಂತೆ ಮಹಿಳೆ ಕೌಸಲ್ಯಾಳನ್ನು ಬಂಧಿಸಲಾಗಿದೆ.
ಸರಿತಾ ಅವರಿಗೆ ನವೆಂಬರ್ 2023ರಲ್ಲಿ ಅಂಜಲಿನ್ ಡಿಸಿಲ್ವಾ ಎಂಬಾಕೆಯ ಮೂಲಕ ಕೌಸಲ್ಯಳ ಪರಿಚಿತಳಾಗಿದ್ದಳು. ಸರಿತಾ ಅವರಿಗೆ ತಾನು ಪಿಎಂಇಜಿಪಿ ಸಬ್ಸಿಡಿ ಸಾಲ ಕೊಡಿಸಬಲ್ಲೆ ಎಂದು ಕೌಸಲ್ಯಾ ನಂಬಿಸಿದ್ದಳು.
ಸಾಲ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೌಸಲ್ಯಾ ಕಾಲಕ್ರಮೇಣ ವಿವಿಧ ಕಾರಣಗಳನ್ನು ನೀಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು ಎನ್ನಲಾಗಿದೆ. ಅವಳ ಭರವಸೆಗಳನ್ನು ನಂಬಿದ ಸರಿತಾ ಅವರು, ಕೌಸಲ್ಯಾಳ ಖಾತೆಗೆ ಮತ್ತು ನಗದು ರೂಪದಲ್ಲಿ ಕೌಸಲ್ಯಳ ಪತಿ ಸಂದೇಶ್, ಪ್ರಕಾಶ್, ಆಶೀಶ್ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತಾ, ಹರಿಣಿ, ನವ್ಯಾ, ಕುಮಾರ್, ಮಾಲತಿ, ಪ್ರವೀಣ್, ಹರಿಪ್ರಸಾದ್, ನಾಗರಾಜ್ ಮತ್ತು ಭಾರತಿ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿಗಳಿಗೆ ಹಲವಾರು ಕಂತುಗಳಲ್ಲಿ ಹಣ ವರ್ಗಾಯಿಸಿದ್ದಾರೆ. ಒಟ್ಟು 80,72,000 ರೂ. ಹಣವನ್ನು ವರ್ಗಾಯಿಸಿದ್ದಾರೆ.
ಅಲ್ಲದೇ ಕೌಶಲ್ಯ, ಅಂಜಲಿನ್ ಡಿಸಿಲ್ವಾ ಎಂಬವರಿಗೂ ಪಿಎಂಇಜಿಪಿ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ಹೇಳಿ ಹಂತ ಹಂತವಾಗಿ ಸರಿತಾ ಲೂವಿಸ್ ಗೆ ತಿಳಿಸಿದ ವ್ಯಕ್ತಿಗಳ ಖಾತೆಗಳಿಗೆ 65,00,000ರೂ. ನಗದು ಹಣವನ್ನು ಪಾವತಿಸಿದ್ದರು. ಕೌಶಲ್ಯ ಇವರಿಬ್ಬರಿಗೆ ಒಟ್ಟು 4 ಕೋಟಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಹಾಗೂ ಬ್ಯಾಂಕ್ ನೌಕರ ಎಂದು ಪೋನ್‌ನಲ್ಲಿ ಮಾತನಾಡಿ ನಂಬಿಸಿ ಒಟ್ಟು 1,45,72,000ರೂ. ಹಣ ಪಡೆದು ವಂಚನೆ ಮಾಡಿರುವುದಾಗಿ ದೂರಲಾಗಿದೆ.
ತನಿಖೆಯನ್ನು ಕೈಗೊಂಡ ಬ್ರಹ್ಮಾವರ ಪೊಲೀಸರು ಆರೋಪಿ ಕೌಶಲ್ಯಳನ್ನು ಬಂಧಿಸಿದ್ದಾರೆ.