-->
ಒಂದು ಸಹಿ..ಒಂದೂವರೆ ವರ್ಷ ಸಂಕಟ..ಅಮಾಯಕನ ಹೋರಾಟಕ್ಕೆ ಕೊನೆಗೂ ಹೈಕೋರ್ಟ್ ನಲ್ಲಿ ಜಯ

ಒಂದು ಸಹಿ..ಒಂದೂವರೆ ವರ್ಷ ಸಂಕಟ..ಅಮಾಯಕನ ಹೋರಾಟಕ್ಕೆ ಕೊನೆಗೂ ಹೈಕೋರ್ಟ್ ನಲ್ಲಿ ಜಯ



ಪೊಲೀಸರನ್ನು ನಂಬಿ ಹಾಕಿದ ಸಹಿಯೊಂದು ಅಮಾಯಕರೊಬ್ಬರನ್ನು ಒಂದೂವರೆ ವರ್ಷಗಳ ಕಾಲ ಆರೋಪಿ ಸ್ಥಾನದಲ್ಲಿ ನಿಲ್ಲಿಸಿತ್ತು. ಕೋರ್ಟ್ ಹತ್ತುವಂತೆ ಮಾಡಿತ್ತು. ಮಾನವ ಹಕ್ಕುಗಳ ಪ್ರತಿಷ್ಠಾನದ ಕಾನೂನು ಹೋರಾಟದಿಂದಾಗಿ ಇದೀಗ ಅಮಾಯಕ ಶೀನ ಪೂಜಾರಿಗೆ ಹೈಕೋರ್ಟ್ ನಲ್ಲಿ ನ್ಯಾಯ ಸಿಕ್ಕಿದೆ. 


ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಶೀನ ಪೂಜಾರಿಯವರ ಪತ್ನಿ ಎಂಡೋಸಲ್ಫಾನ್ ಪೀಡಿತೆ. ಆಕೆಯ ಚಿಕಿತ್ಸೆ, ಕಾಲೇಜಿನಲ್ಲಿ ಓದುತ್ತಿರುವ ಇಬ್ಬರು ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬದ ನಿರ್ವಹಣೆಗಾಗಿ ಶೀನ ಪೂಜಾರಿ ಹಗಲಿರುಳು ರಿಕ್ಷಾ ಚಲಾಯಿಸುತ್ತಿದ್ದರು. ಸ್ವಾಭಿಮಾನದಿಂದ ದುಡಿದು ಬದುಕುತ್ತಿದ್ದ ಶೀನ ಪೂಜಾರಿ ಅವರು 2025ರ ಆಗಸ್ಟ್ 24ರ ದಿನ ತನ್ನ ರಿಕ್ಷಾದಲ್ಲಿ ಬಾಡಿಗೆಗೆ ಬಂದಿದ್ದ ಪರಿಚಯಸ್ಥ ಉದಯ ಶೆಟ್ಟಿಯವರನ್ನು  ಗಂಗೊಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ಠಾಣೆಯ ಹೊರಗೆ ರಿಕ್ಷಾ ನಿಲ್ಲಿಸಿ ಕಾಯುತ್ತಿದ್ದ ಅವರನ್ನು ಪೊಲೀಸರು ಒಳಗೆ ಕರೆಸಿ, ಔಪಚಾರಿಕ ಪ್ರಕ್ರಿಯೆಯೆಂದು ಹೇಳಿ ದಾಖಲೆಯೊಂದಕ್ಕೆ ಸಹಿ ಪಡೆದಿದ್ದಾರೆ ಎನ್ನಲಾಗಿದೆ.


ನನಗೆ ಓದಲು-ಬರೆಯಲು ಬರುವುದಿಲ್ಲ. ಇದಕ್ಕೆ ಯಾಕೆ ಸಹಿ ಹಾಕಬೇಕು? ಎಂಬ ಅವರ ಪ್ರಶ್ನೆಗೆ ಇದು ಕೇವಲ ಔಪಚಾರಿಕ ಪ್ರಕ್ರಿಯೆ ಎಂದು ತಿಳಿಸಲಾಯಿತು. ಪೊಲೀಸರನ್ನು ನಂಬಿದ ಶೀನ ಪೂಜಾರಿ ಸಹಿ ಹಾಕಿದರು. ಅವರು ಯಾವುದೇ ಅಪರಾಧ ಮಾಡಿರಲಿಲ್ಲ.

ಯಾವ ಕಳ್ಳತನವನ್ನೂ ಮಾಡಿರಲಿಲ್ಲ. ಸರಕಾರಿ ಜಮೀನಿನಲ್ಲಿ ಕಲ್ಲುಕೋರೆ ನಡೆಸಿರಲಿಲ್ಲ. ಕೆಲವು ದಿನಗಳ ಬಳಿಕ ನ್ಯಾಯಾಲಯದಿಂದ ನೋಟಿಸ್ ಬಂದಿದೆ ಎಂದು ತಿಳಿಸಲಾಯಿತು. ಸಮನ್ಸ್ ಓದಿಸಿದಾಗ ಶೀನ ಪೂಜಾರಿ ದಂಗಾದರು.  

ಆದರೆ, ಪೊಲೀಸರು ಕೇಳಿದಾಗ ವಿಶ್ವಾಸದಿಂದ ಹಾಕಿದ ಒಂದು ಸಹಿ, ಅವರನ್ನು ಕೆಂಪು ಕಲ್ಲುಕಳವು ಪ್ರಕರಣದ ಆರೋಪಿಯನ್ನಾಗಿ ಮಾಡಿತು.  ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಕೋರೆ ನಡೆಸಿ ಕೆಂಪುಕಲ್ಲು ಕಳವು ಮಾಡಿದ ಪ್ರಕರಣದಲ್ಲಿ ಉದಯ ಶೆಟ್ಟಿಯವರೊಂದಿಗೆ ಶೀನ ಪೂಜಾರಿಯವರನ್ನೂ ಎರಡನೇ ಆರೋಪಿಯನ್ನಾಗಿ ಸೇರಿಸಲಾಗಿತ್ತು. ಕಲ್ಲುಕೋರೆ ವ್ಯವಹಾರದ ಬಗ್ಗೆ ಯಾವುದೇ ಮಾಹಿತಿಯಿಲ್ಲದ, ಕೇವಲ ರಿಕ್ಷಾ ಚಾಲಕರಾಗಿದ್ದ ವ್ಯಕ್ತಿಯೊಬ್ಬರು ಮಾನಸಿಕ ಯಾತನೆ, ಸಾಮಾಜಿಕ ಅವಮಾನ ಎದುರಿಸುವಂತಾಯಿತು. ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ, ತಪ್ಪೊಪ್ಪಿಕೊಂಡರೆ ಒಂದೆರಡು ವಿಚಾರಣೆಯಲ್ಲೇ ಪ್ರಕರಣ ಮುಗಿಯುತ್ತದೆ ಎಂಬ ರೀತಿಯ ಸಲಹೆ ದೊರಕಿತ್ತು ಎಂದು ಶೀನ ಪೂಜಾರಿ ಆರೋಪಿಸಿದ್ದಾರೆ.

ಆದರೆ, ತಾವು ಮಾಡದ ತಪ್ಪನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಳ್ಳಲು ಅವರ ಆತ್ಮಸಾಕ್ಷಿ ಒಪ್ಪಲಿಲ್ಲ. ಶೀನ ಪೂಜಾರಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋದರು. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಿದ ಪ್ರತಿಷ್ಠಾನ, ಶೀನ ಪೂಜಾರಿಯವರ ಪರವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಆರಂಭಿಸಿತು.


ಪ್ರತಿಷ್ಠಾನದ ವಕೀಲ ಎನ್. ವಿವೇಕಾನಂದ ಅವರ ಮೂಲಕ ಸಲ್ಲಿಸಲಾದ ಅರ್ಜಿ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತು. ಶೀನ ಪೂಜಾರಿಯವರನ್ನು ಆರೋಪಿಯನ್ನಾಗಿ ಮಾಡಲು ಇರುವ ಆಧಾರಗಳೇನು ಎಂಬ ಕುರಿತು ಗಂಗೊಳ್ಳಿ ಠಾಣೆಗೆ ನ್ಯಾಯಾಲಯ ಸ್ಪಷ್ಟನೆ ಕೇಳಿತ್ತು ಎನ್ನಲಾಗಿದೆ. ನಾಲ್ಕು ಬಾರಿ ಅವಕಾಶ ನೀಡಿದರೂ ಸೂಕ್ತ ಉತ್ತರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ, 2026ರ ಆಗಸ್ಟ್ 6ರಂದು ಹೈಕೋರ್ಟ್ ಮಹತ್ವದ ಆದೇಶ ನೀಡಿತು. ಶೀನ ಪೂಜಾರಿಯವರ ಹೆಸರನ್ನು ದೋಷಾರೋಪಣ ಪಟ್ಟಿಯಿಂದ ಕೈಬಿಟ್ಟು, ಅವರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲಾಯಿತು.

ಒಂದೂವರೆ ವರ್ಷಗಳ ಕಾಲ ಕ್ರಿಮಿನಲ್ ಪ್ರಕರಣದ ಆರೋಪಿಯಾಗಿ ಬದುಕಿದ ವ್ಯಕ್ತಿಗೆ ಕೊನೆಗೂ ನ್ಯಾಯ ದೊರೆತಿದೆ. ಆದರೆ ತನಗಾದ ಅನ್ಯಾಯ ಇನ್ಯಾರಿಗೂ ಆಗಬಾರದು. ಇನ್ಯಾವ ಅಮಾಯಕನನ್ನು ಅನ್ಯಾಯವಾಗಿ ಕಾನೂನಿನ ಸರಪಳಿ ಬಿಗಿಯಬಾರದು ಎನ್ನುತ್ತಾರೆ ಶೀನಪೂಜಾರಿ. ತನಗಾದ ಅವಮಾನಕ್ಕೆ ತಾನು ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. 

ಶೀನ ಪೂಜಾರಿ ಬಯಸಿದಲ್ಲಿ ಸಂಬಂಧಪಟ್ಟವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಂಪೂರ್ಣ ಕಾನೂನು ಸಹಕಾರ ನೀಡುವುದಾಗಿ ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ. 

ಪೊಲೀಸರನ್ನು ನಂಬಿ ದಾಖಲೆಯೊಂದಕ್ಕೆ ಹಾಕಿದ ಒಂದು ಸಹಿ... ಅಮಾಯಕ ರಿಕ್ಷಾ ಚಾಲಕನೊಬ್ಬನ ಬದುಕನ್ನೇ ಒಂದೂವರೆ ವರ್ಷಗಳ ಕಾಲ ಸಂಕಟಕ್ಕೆ ತಳ್ಳಿತು. ತಾನು ಮಾಡದ ಅಪರಾಧದ ಆರೋಪಿಯಾಗಿ ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು. ಸಾಮಾಜಿಕ ಅವಮಾನ, ಮಾನಸಿಕ ಯಾತನೆ ಮತ್ತು ಕುಟುಂಬದ ಆತಂಕದ ನಡುವೆಯೇ ಬದುಕಬೇಕಾಯಿತು. ಹಾಗಾಗಿ ಯಾವುದೇ ದಾಖಲೆ ಅಥವಾ ಹೇಳಿಕೆಯ ಮೇಲೆ ಸಹಿ ಹಾಕುವ ಮುನ್ನ ಅದರ ಸಂಪೂರ್ಣ ವಿವರವನ್ನು ತಿಳಿದುಕೊಂಡು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂಬ ಮಹತ್ವದ ಸಂದೇಶವನ್ನು ಈ ಘಟನೆ ನೀಡಿದೆ. 


Ads on article

Advertise in articles 1

advertising articles 2

Advertise under the article