-->
 ಉಡುಪಿ ಜಿಲ್ಲೆಯ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ಆನ್ ಲೈನ್ ನೋಂದಣಿ ಕಡ್ಡಾಯ

ಉಡುಪಿ ಜಿಲ್ಲೆಯ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ಆನ್ ಲೈನ್ ನೋಂದಣಿ ಕಡ್ಡಾಯ


ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2026-27ನೇ ಸಾಲಿನ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ದಸರಾ ಕ್ರೀಡಾಕೂಟವನ್ನು ಸೆಪ್ಟೆಂಬರ್ 13ರಂದು ಆಯೋಜಿಸಲಾಗಿದೆ.

ಉಡುಪಿ ಹಾಗೂ ಬ್ರಹ್ಮಾವರ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉಡುಪಿಯಲ್ಲಿ, ಹೆಬ್ರಿ ಹಾಗೂ ಕಾರ್ಕಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಕಾರ್ಕಳದಲ್ಲಿ, ಕುಂದಾಪುರ ಹಾಗೂ ಬೈಂದೂರು ತಾಲೂಕು ಮಟ್ಟದ ಕ್ರೀಡಾಕೂಟವನ್ನು ಕುಂದಾಪುರದಲ್ಲಿ ಆಯೋಜಿಸಲಾಗುವುದು. ಕಾಪು ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಹೆಜಮಾಡಿಯಲ್ಲಿ ನಡೆಯಲಿದೆ.

ಪುರುಷರ ವಿಭಾಗದಲ್ಲಿ 100, 200, 400, 800, 1500, 5000 ಹಾಗೂ 10,000 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡೆಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, 110 ಮೀಟರ್ ಹರ್ಡಲ್ಸ್, 4x100 ಹಾಗೂ 4x400 ಮೀಟರ್ ರಿಲೇ ಸ್ಪರ್ಧೆಗಳು ನಡೆಯಲಿವೆ.

ಮಹಿಳೆಯರ ವಿಭಾಗದಲ್ಲಿ 100, 200, 400, 800, 1500 ಹಾಗೂ 3000 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡೆಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, 100 ಮೀಟರ್ ಹರ್ಡಲ್ಸ್, 4x100 ಹಾಗೂ 4x400 ಮೀಟರ್ ರಿಲೇ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಇದರೊಂದಿಗೆ ಪುರುಷರು ಹಾಗೂ ಮಹಿಳೆಯರಿಗಾಗಿ ವಾಲಿಬಾಲ್, ಖೋ-ಖೋ, ಕಬಡ್ಡಿ, ಫುಟ್‌ಬಾಲ್ ಹಾಗೂ ಥ್ರೋಬಾಲ್ ಸೇರಿದಂತೆ ವಿವಿಧ ಗುಂಪು ಕ್ರೀಡೆಗಳೂ ನಡೆಯಲಿವೆ.

ಸೆಪ್ಟೆಂಬರ್ 12ರಂದು ಉಡುಪಿ- ಬ್ರಹ್ಮಾವರ ತಾಲೂಕು ಮಟ್ಟದ ಫುಟ್‌ಬಾಲ್ ಸ್ಪರ್ಧೆಗಳು ಮಣಿಪಾಲ ಎಂಜೆಸಿ ಕ್ರೀಡಾಂಗಣ, ಕುಂದಾಪುರ-ಬೈಂದೂರು ತಾಲೂಕು ಮಟ್ಟದ ಫುಟ್ ಬಾಲ್ ಕ್ರೀಡಾಕೂಟ ಕೋಟೇಶ್ವರ ಕೆಪಿಎಸ್, ಕಾರ್ಕಳ- ಹೆಬ್ರಿ ತಾಲೂಕು ಮಟ್ಟದ ಫುಟ್ಬಾಲ್ ಕ್ರೀಡಾಕೂಟವು ಕಾರ್ಕಳ ತಾಲೂಕು ಕ್ರೀಡಾಂಗಣ, ಕಾಪು ತಾಲೂಕು ಮಟ್ಟದ ಫುಟ್ಬಾಲ್ ಸ್ಪರ್ಧೆ ಹೆಜಮಾಡಿ ಕ್ರೀಡಾಂಗಣ ಹಾಗೂ ಸೆ.13ರಂದು  ಉಡುಪಿ- ಬ್ರಹ್ಮಾವರ ತಾಲೂಕು ಮಟ್ಟದ ಖೋಖೋ ಸ್ಪರ್ಧೆಯು ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.  ಭಾಗವಹಿಸುವ ಸ್ಪರ್ಧಿಗಳು ಪೂರ್ವಾಹ್ನ 9 ಗಂಟೆಯೊಳಗಾಗಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಸಂಘಟಕರು ತಿಳಿಸಿದ್ದಾರೆ.

ಒಬ್ಬ ಕ್ರೀಡಾಪಟು ಅಥವಾ ತಂಡವು ಯಾವುದೇ ಜಿಲ್ಲೆಯಲ್ಲಿ ಒಂದು ಬಾರಿ ತಾಲೂಕು ಅಥವಾ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ ಬಳಿಕ ಬೇರೆ ಯಾವುದೇ ಜಿಲ್ಲೆಯ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಆಧಾರ್ ಕಾರ್ಡ್‌ನ ಪ್ರತಿಯನ್ನು ತರಬೇಕು. ಮುಂದಿನ ಹಂತದ ಸ್ಪರ್ಧೆ ನಡೆಸಲು ಕನಿಷ್ಠ ನಾಲ್ಕು ತಂಡಗಳು ಇರಬೇಕು. ನಾಲ್ಕು ತಂಡಗಳಿಗಿಂತ ಕಡಿಮೆ ಇದ್ದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿ ಅರ್ಹ ತಂಡವನ್ನು ಮುಂದಿನ ಹಂತಕ್ಕೆ ಕಳುಹಿಸಲಾಗುವುದು.

ಒಬ್ಬ ಕ್ರೀಡಾಪಟುವಿಗೆ ಗರಿಷ್ಠ ಎರಡು ವೈಯಕ್ತಿಕ ಹಾಗೂ ಒಂದು ಗುಂಪು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ.

ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಮತ್ತು ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿವೆ.

ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳು www.dasaracmcup.in ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಉಡುಪಿ ತಾಲೂಕು ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ವಸಂತ ಜೋಗಿ(9880655125) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article