ಅಷ್ಟಮಿಗೆ ‘ಮರ್ಮೇನ್’ ವೇಷದಲ್ಲಿ ರವಿ ಕಟಪಾಡಿ; ಅನಾರೋಗ್ಯ ಪೀಡಿತ ಮಕ್ಕಳ ನೆರವಿಗೆ 15 ಲಕ್ಷ ಗುರಿ
Saturday, August 29, 2026
ಕಳೆದ ಹದಿನಾಲ್ಕು ವರ್ಷಗಳಿಂದ ಕೃಷ್ಣಾಷ್ಟಮಿ ಪ್ರಯುಕ್ತ ವಿಭಿನ್ನ ವೇಷಗಳನ್ನು ಧರಿಸಿ ಬೀದಿಗಿಳಿದು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾಗುತ್ತಿರುವ ರವಿ ಕಟಪಾಡಿ ಅವರು ಈ ಬಾರಿ ‘ಮರ್ಮೇನ್’ (Merman) ವೇಷ ಧರಿಸಿ ಜನರ ಗಮನ ಸೆಳೆಯಲಿದ್ದಾರೆ.
ಪುರಾಣ ಕಥೆಗಳಲ್ಲಿ ಕಾಣಿಸಿಕೊಳ್ಳುವ ಕಾಲ್ಪನಿಕ ಸಮುದ್ರ ಜೀವಿಯ ರೂಪವಾದ ಮರ್ಮೇನ್ ವೇಷವನ್ನು ತೊಟ್ಟು ಈ ಬಾರಿ ಸಾರ್ವಜನಿಕರ ಮುಂದೆ ಬರಲಿರುವ ರವಿ ಕಟಪಾಡಿ, ಇದರ ಮೂಲಕ ಸಂಗ್ರಹವಾಗುವ ಹಣವನ್ನು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡಲು ಮುಂದಾಗಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ‘ರವಿ ಫ್ರೆಂಡ್ಸ್ ಕಟಪಾಡಿ’ ತಂಡದ ಮೂಲಕ ಒಟ್ಟು 1.85 ಕೋಟಿ ಹಣವನ್ನು ಸಂಗ್ರಹಿಸಿ 204 ಅನಾರೋಗ್ಯ ಪೀಡಿತ ಮಕ್ಕಳಿಗೆ ಹಸ್ತಾಂತರಿಸಲಾಗಿದೆ. ಈ ಬಾರಿ 15 ಲಕ್ಷ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ.
ಈ ಬಾರಿ ಸಂಗ್ರಹವಾಗುವ ಹಣವನ್ನು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಒಂದು ಮಗು ಹಾಗೂ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂದು ರವಿ ಕಟಪಾಡಿ ತಿಳಿಸಿದ್ದಾರೆ.
ಈ ಬಾರಿ ತಾನು ಧರಿಸುತ್ತಿರುವ ವೇಷವು ಕೊನೆಯದಾಗಿದ್ದು, ಮುಂದಿನ ವರ್ಷಗಳಿಂದ ಕೃಷ್ಣಾಷ್ಟಮಿ ಸಂದರ್ಭದಲ್ಲಿ ವೇಷ ಧರಿಸುವುದನ್ನು ನಿಲ್ಲಿಸುವುದಾಗಿ ರವಿ ಕಟಪಾಡಿ ತಿಳಿಸಿದ್ದಾರೆ. ವೇಷ ಧರಿಸಲು ನಿರಂತರವಾಗಿ ರಾಸಾಯನಿಕಗಳನ್ನು ಬಳಸುತ್ತಿರುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ವೇಷ ಧರಿಸುವ ಕಾರ್ಯದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದರು.
ಆದರೆ ವೇಷ ಧರಿಸುವುದನ್ನು ನಿಲ್ಲಿಸಿದರೂ, ಪುಟಾಣಿ ಮಕ್ಕಳಿಗೆ ತನ್ನಿಂದಾಗುವ ಸಹಾಯವನ್ನು ಮುಂದುವರಿಸುವುದಾಗಿ ರವಿ ಕಟಪಾಡಿ ಭರವಸೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಹೇಶ್ ಶೆಣೈ, ಹರ್ಷ, ಶ್ರವಣ್ ಹಾಗೂ ಆಶಿಕ್ ಉಪಸ್ಥಿತರಿದ್ದರು.

