ಮಂಗಳೂರು ಕಾರಾಗೃಹದಲ್ಲಿ ದಿಢೀರ್ ದಾಳಿ: 10 ಸ್ಮಾರ್ಟ್‌ಫೋನ್‌ಗಳ ಜಪ್ತಿ
ಕೈದಿಗಳು ಅಕ್ರಮವಾಗಿ ಮೊಬೈಲ್ ಫೋನ್ ಬಳಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಬರ್ಕೆ ಠಾಣೆ ಪೊಲೀಸರು ಮಂಗಳೂರು ಜಿಲ್ಲಾ ಕಾರಾಗೃಹದ ಮೇಲೆ ಅನಿರೀಕ್ಷಿತ ದಾಳಿ ನಡೆಸಿ 9 ಮಂದಿ ಕೈದಿಗಳಿಂದ ಬರೋಬ್ಬರಿ 10 ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರಾಗೃಹದ ಎ-ಬ್ಲಾಕ್‌ನಲ್ಲಿರುವ ಕೈದಿಗಳ ಕೊಠಡಿ ಹಾಗೂ ಅವರ ವಸ್ತುಗಳ ತೀವ್ರ ಶೋಧ ನಡೆಸಿದ ವೇಳೆ ಅಕ್ರಮವಾಗಿ ಬಚ್ಚಿಟ್ಟುಕೊಂಡಿದ್ದ ಸ್ಮಾರ್ಟ್‌ಫೋನ್‌ಗಳು ಪತ್ತೆಯಾಗಿವೆ. ಈ ಸಂಬಂಧ ರಿಫತ್ ಅಲಿ, ಇಬ್ರಾಹಿಂ ಖಲೀಲ್, ಅಸ್ಫಕ್ ಅಲಿಯಾಸ್ ಜುಟ್ಟು ಅಸ್ಫಕ್, ಅರ್ಷದ್, ದಾವುದ್ ಫರ್ವೇಜ್, ನಝರತ್ ಅಲಿ, ಶಿಫಾನ್, ಅಬ್ದುಲ್ ಸಾದೀಕ್ ಹಾಗೂ ಅರ್ಫಜ್ ಸೇರಿದಂತೆ ಒಟ್ಟು 9 ಮಂದಿ ಕೈದಿಗಳಿಂದ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಮೊಬೈಲ್ ಹೊಂದಿದ್ದ ಕೈದಿಗಳ ಪೈಕಿ ಕೆಲವರು ಗಂಭೀರ ಅಪರಾಧ ಪ್ರಕರಣಗಳ ಆರೋಪಿಗಳಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ರಿಫತ್ ಅಲಿ, ಇಬ್ರಾಹಿಂ ಖಲೀಲ್, ಜುಟ್ಟು ಅಸ್ಫಕ್ ಹಾಗೂ ಅರ್ಷದ್ ಅವರು ಇತ್ತೀಚೆಗೆ ತೊಕ್ಕೊಟ್ಟು ಸಮೀಪ ನಡೆದ ಅರೀಫ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರು ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗಿರುವ ಡ್ರಗ್ ಪೆಡ್ಲಿಂಗ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು, ಅರ್ಫಜ್ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೋಕಾ ಕಾಯ್ದೆಯಡಿ ಪ್ರಕರಣವೊಂದರ ಆರೋಪಿಯಾಗಿದ್ದಾನೆ.