ಸೆ.3- 4: ಟೈಗರ್ ಫ್ರೆಂಡ್ಸ್ ಸೇವಾ ಟ್ರಸ್ಟ್ ವತಿಯಿಂದ ‘ಮುದ್ದುಕೃಷ್ಣ’ ಸ್ಪರ್ಧೆ- ‘ಉಡುಪಿ ಪಿಲಿನಲಿಕೆ’
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಟೈಗರ್ ಫ್ರೆಂಡ್ಸ್ ಸೇವಾ ಟ್ರಸ್ಟ್ (ರಿ.), ಉಡುಪಿ ವತಿಯಿಂದ ಸೆಪ್ಟೆಂಬರ್ 3ರಂದು ಗುರುವಾರ ಸಂಜೆ 3.30ಕ್ಕೆ ಕುಂಜಿಬೆಟ್ಟು ಮೀನು ಮಾರುಕಟ್ಟೆ ಬಳಿ ‘ಮುದ್ದು ಕೃಷ್ಣ ಸ್ಪರ್ಧೆ’ ಹಾಗೂ ಸೆಪ್ಟೆಂಬರ್ 4ರಂದು ಐದನೇ ವರ್ಷದ ಅದ್ಧೂರಿ ‘ಉಡುಪಿ ಪಿಲಿನಲಿಕೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಗೌರವಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.3ರಂದು ನಡೆಯಲಿರುವ ಮುದ್ದು ಕೃಷ್ಣ ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, ಪ್ರಥಮ ಬಹುಮಾನ ರೂ.5,001, ದ್ವಿತೀಯ ರೂ.2,501 ಹಾಗೂ ತೃತೀಯ ರೂ.1,501 ನೀಡಲಾಗುವುದು. ಅಲ್ಲದೆ 20 ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಗುವುದು ಎಂದರು.
ಸೆ.4ರಂದು ನಡೆಯಲಿರುವ ಹುಲಿವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ರೂ.1,11,111 ಹಾಗೂ ದ್ವಿತೀಯ ಬಹುಮಾನವಾಗಿ ರೂ.55,555 ನೀಡಲಾಗುವುದು. ವೈಯಕ್ತಿಕ ಕುಣಿತ ಹಾಗೂ ‘ಕಿನ್ನಿ ಪಿಲಿ ಕುಣಿತ’ ವಿಭಾಗದ ವಿಜೇತರಿಗೆ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೂ ರೂ.10,000 ಗೌರವಧನ ನೀಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೃಷ್ಟಿ ನೃತ್ಯ ಕಲಾ ಕುಟೀರ, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಖ್ಯಾತಿಯ ನಾಟ್ಯ ಸ್ಕೂಲ್ ಆಫ್ ಡ್ಯಾನ್ಸ್, ಕೋಟೇಶ್ವರ, ಬೇಡರ ವೇಷ ಹಾಗೂ ಫಾತಿಮಾ ಇಸ್ವಿಕ್ ಅವರ ಭಕ್ತಿ ಗಾಯನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಚಲನಚಿತ್ರ ನಟ-ನಟಿಯರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹರೀಶ್ ಕುಮಾರ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ವಹಿಸಲಿದ್ದು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಶಶಿರಾಜ್ ಕುಂದರ್ ಹಾಗೂ ಟ್ರಸ್ಟಿಗಳಾದ ಭೋಜ ಶೇರಿಗಾರ್, ಹರೀಶ್ ಪೂಜಾರಿ ಮತ್ತು ರೂಪೇಶ್ ಕಲ್ಮಾಡಿ ಉಪಸ್ಥಿತರಿದ್ದರು.