-->
 ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಎಲ್ಐಸಿ ಪಾತ್ರ ಹಿರಿದು: ಗಣಪತಿ ಭಟ್

ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಎಲ್ಐಸಿ ಪಾತ್ರ ಹಿರಿದು: ಗಣಪತಿ ಭಟ್


ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಜನತೆಯ ವಿಶ್ವಾಸಾರ್ಹ ಸಂಸ್ಥೆಯಾಗಿದ್ದು, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಎಲ್ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗೀಯ ಅಧಿಕಾರಿ ಗಣಪತಿ ಭಟ್ ಹೇಳಿದರು.

ಉಡುಪಿಯ ಎಲ್ಐಸಿ ವಿಭಾಗೀಯ ಕಚೇರಿಯಲ್ಲಿ ಮಂಗಳವಾರ ನಡೆದ ವಿಮಾ ಸಪ್ತಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1956ರ ಸೆಪ್ಟೆಂಬರ್ 1ರಂದು 245 ವಿಮಾ ಸಂಸ್ಥೆಗಳ ಒಗ್ಗೂಡುವಿಕೆಯಿಂದ ರಾಷ್ಟ್ರೀಕರಣಗೊಂಡ ಎಲ್ಐಸಿ, ಇಂದು ಬೃಹದಾಕಾರವಾಗಿ ಬೆಳೆದಿದೆ. ಜನರಲ್ಲಿ ಉಳಿತಾಯ ಪ್ರಜ್ಞೆ ಮೂಡಿಸುವುದರ ಜೊತೆಗೆ ದೇಶದ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುವ ಧ್ಯೇಯದೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಹಲವು ಮಹತ್ವದ ಯೋಜನೆಗಳಿಗೆ ಸಹಕಾರ ನೀಡಿದೆ. ಕೈಗಾ ಹಾಗೂ ಆಲಮಟ್ಟಿ ಯೋಜನೆಗಳು ಇದಕ್ಕೆ ಉದಾಹರಣೆಗಳಾಗಿವೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಎಲ್ಐಸಿ ಪ್ರಸ್ತುತ ಶೇರು ಮಾರುಕಟ್ಟೆಯನ್ನೂ ಪ್ರವೇಶಿಸಿದ್ದು, ವಿಮಾ ಪ್ರತಿನಿಧಿಗಳ ಮೂಲಕ ವಿವಿಧ ವಿಮಾ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದೆ ಎಂದರು.

ಕಳೆದ ಆರ್ಥಿಕ ವರ್ಷದಲ್ಲಿ ಎಲ್ಐಸಿ ಉಡುಪಿ ವಿಭಾಗ ಗಮನಾರ್ಹ ಸಾಧನೆ ಮಾಡಿದ್ದು, 1,33,316 ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ 508.7 ಕೋಟಿ ಪ್ರಥಮ ಪ್ರೀಮಿಯಂ ಆದಾಯ ಗಳಿಸಿದೆ. ಅಲ್ಲದೆ, 1,39,693 ಪಾಲಿಸಿಗಳಿಗೆ ಸಂಬಂಧಿಸಿದಂತೆ 1,138.75 ಕೋಟಿ ಮೊತ್ತದ ಕ್ಲೈಮ್‌ಗಳನ್ನು ಪಾವತಿಸಿದೆ. ವಿಮಾ ಕ್ಲೈಮ್ ಪಾವತಿಯಲ್ಲಿ ಶೇ.99.44ರ ಸಾಧನೆ ದಾಖಲಿಸಿದೆ ಎಂದು ಗಣಪತಿ ಭಟ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ಉಡುಪಿ ಏರಿಯಾ ಹೆಡ್ ಅಶೋಕ್ ಬಾಂಡಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಲ್ಐಸಿ ಪ್ರಬಂಧಕ (ಮಾರುಕಟ್ಟೆ) ಗುರುದಾಸ್ ಎಸ್. ರಾವ್ ಉಪಸ್ಥಿತರಿದ್ದರು.

ಎಲ್ಐಸಿ ಪ್ರಬಂಧಕ (ವಿಕ್ರಯ) ದುರ್ಗಾರಾಮ್ ಶೆಣೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಾರುಕಟ್ಟೆ ವಿಭಾಗದ ಉಪಶ್ರೇಣಿ ಸಹಾಯಕ ಬಾಲಕೃಷ್ಣ ಶೆಣೈ ಸಹಕರಿಸಿದರು.

ಈ ಸಂದರ್ಭದಲ್ಲಿ ನಿವೃತ್ತರಾಗಲಿರುವ ಉದ್ಯೋಗಿಗಳನ್ನು ಗೌರವಿಸಲಾಯಿತು. ವಿಮಾ ಸಪ್ತಾಹದ ಅಂಗವಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸೆಪ್ಟೆಂಬರ್ 7ರಂದು ಸಮಾರೋಪ ಸಮಾರಂಭದಲ್ಲಿ ನಡೆಯಲಿದೆ.

Ads on article

Advertise in articles 1

advertising articles 2

Advertise under the article