ಕಾಪು: ಗುರು ಸಂದೇಶ ಸಾಮರಸ್ಯ ಜಾಥಾ: ಸಚಿವ ಯು.ಟಿ ಖಾದರ್ ಚಾಲನೆ
Monday, August 31, 2026
ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.), ಉಡುಪಿ ವತಿಯಿಂದ ಆಯೋಜಿಸಲಾದ ಗುರು ಸಂದೇಶ ಸಾಮರಸ್ಯ ಜಾಥಾಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಕಾಪುವಿನಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಮನುಷ್ಯನಿಗೆ” ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಶ್ವಮಾನವ ಸಂದೇಶವು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.
ಜಾತಿ–ಮತ ಭೇದಗಳನ್ನು ಮೀರಿ ಸಮಾನತೆ, ಸಹೋದರತೆ, ಶಿಕ್ಷಣ, ಸಂಘಟನೆ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಬೆಳೆಸುವಲ್ಲಿ ನಾರಾಯಣ ಗುರುಗಳ ಚಿಂತನೆಗಳು ಮಹತ್ವದ ಪಾತ್ರ ವಹಿಸಿವೆ. ಯುವಜನತೆ ಗುರುಗಳ ಆದರ್ಶಗಳನ್ನು ಅರಿತು, ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಗುರು ಸಂದೇಶವನ್ನು ಜನಮಾನಸಕ್ಕೆ ತಲುಪಿಸುವ ಹಾಗೂ ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಅರ್ಥಪೂರ್ಣ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದು ಯು.ಟಿ. ಖಾದರ್ ಹೇಳಿದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ವಿದ್ಯಾರ್ಥಿಗಳು, ಯುವಜನತೆ ಹಾಗೂ ಗುರುಭಕ್ತರು ಉಪಸ್ಥಿತರಿದ್ದರು.

