ದೈವಾರಾಧನೆಯ ನಿಷ್ಠಾವಂತ ಆರಾಧಕಿ ಅಮ್ಮಣ್ಣಿ ಡಂಗು ಪಾಣಾರ ನಿಧನ
ತುಳುನಾಡಿನ ದೈವಾರಾಧನೆ ಹಾಗೂ ಜನಪದ ಕಲೆ, ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಹಿರಿಯ ಕಲಾವಿದೆ, ದೈವಾರಾಧನೆಯ ನಿಷ್ಠಾವಂತ ಆರಾಧಕಿ, ದಿ. ಪಡ್ಡಮ ಡಂಗು ಪಾಣಾರ ಅವರ ಧರ್ಮಪತ್ನಿ ಅಮ್ಮಣ್ಣಿ ಡಂಗು ಪಾಣಾರ ಅವರು ಇಂದು ನಿಧನರಾದರು.
ಅವರು ಮಕ್ಕಳಾದ ಖ್ಯಾತ ದೈವನರ್ತಕರಾದ ಪಡ್ಡಮ ಸಂಜೀವ ಪಾಣಾರ ಹಾಗೂ ಪಡ್ಡಮ ರವಿ ಪಾಣಾರ, ಖ್ಯಾತ ನಾಗಸ್ವರ ವಾದಕರಾದ ಪಡ್ಡಮ ಪಾಂಡುರಂಗ ಪಾಣಾರ ಅವರನ್ನು ಅಗಲಿದ್ದಾರೆ.
ಅಮ್ಮಣ್ಣಿ ಪಾಣಾರ ಅವರು ತುಳುನಾಡಿನ ದೈವಾರಾಧನೆಯನ್ನು ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ನಿಷ್ಠೆಯಿಂದ ಆರಾಧಿಸುತ್ತಾ ಜನರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದರು. ದೈವಾರಾಧನೆಯ ಜೊತೆಗೆ ತುಳುನಾಡಿನ ಸಾಂಪ್ರದಾಯಿಕ ಜನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಕೃಷಿ ಪಾಡ್ದನ, ದೈವ-ದೇವರುಗಳ ಪಾಡ್ದನ ಹಾಗೂ ಮಾದಿರ ನಲಿಕೆ ಸೇರಿದಂತೆ ತುಳುನಾಡಿನ ವಿವಿಧ ಜನಪದ ಕಲಾ ಪ್ರಕಾರಗಳಲ್ಲಿ ಅವರು ವಿಶೇಷ ಪರಿಣತಿ ಹೊಂದಿದ್ದರು. ತಮ್ಮ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯುವ ಮೂಲಕ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಅವರ ಕಲಾ ಸೇವೆ ಹಾಗೂ ದೈವಾರಾಧನೆಯ ಕ್ಷೇತ್ರದಲ್ಲಿನ ಸಾಧನೆಗೆ ರಾಜ್ಯ ಹಾಗೂ ವಿವಿಧ ರಾಜ್ಯಗಳ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಸರಳತೆ, ನಿಷ್ಠೆ ಹಾಗೂ ಕಲಾ ಪರಂಪರೆಯ ಮೇಲಿನ ಅಪಾರ ಅಭಿಮಾನದಿಂದಾಗಿ ಅವರು ತುಳುನಾಡಿನ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದರು.
ಅಮ್ಮಣ್ಣಿ ಪಾಣಾರ ಅವರ ನಿಧನಕ್ಕೆ ದೈವಾರಾಧಕರು, ಕಲಾವಿದರು, ಅಭಿಮಾನಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.