ಗುಜರಿ ವ್ಯಾಪಾರಿಗೆ ಹಣದ ಬೇಡಿಕೆ, ಬೆದರಿಕೆ: ನಾಗೇಂದ್ರ ಪುತ್ರನ್ ಸೇರಿ ಮೂವರ ವಿರುದ್ಧ ಎಫ್ಐಆರ್
ಸರ್ಕಾರಿ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದಾಗಿ ಆರೋಪಿಸಿ ಗುಜರಿ ವ್ಯಾಪಾರಿಯೊಬ್ಬರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದಲ್ಲಿ ಕಾಂಗ್ರೆಸ್ ಮುಖಂಡ ನಾಗೇಂದ್ರ ಪುತ್ರನ್ ಸೇರಿ ಮೂವರ ವಿರುದ್ಧ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಮುಖಂಡ ನಾಗೇಂದ್ರ ಪುತ್ರನ್, ಸಚಿನ್ ಹಾಗೂ ಪ್ರದೀಪ್ ಅಲಿಯಾಸ್ ಎಸ್ಟಿಡಿ ಪ್ರದೀಪ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.
ಆಗಸ್ಟ್ 31ರಂದು ಬೆಳಗ್ಗೆ ಸುಮಾರು 11.30ರ ವೇಳೆಗೆ ಎರಡನೇ ಆರೋಪಿ ಸಚಿನ್ ಎಂಬಾತ ಗುಜರಿ ವ್ಯಾಪಾರಿಗೆ ಕರೆ ಮಾಡಿ, ಎರಡು ಚೀಲ ಅಕ್ಕಿಯನ್ನು ಮನೆಯ ಅಂಗಳದಲ್ಲಿ ಇರಿಸಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ವ್ಯಾಪಾರಿಯು ಮನೆಗೆ ಆಗಮಿಸಿದಾಗ ಸಚಿನ್ ಆಟೋರಿಕ್ಷಾದಲ್ಲಿ ಹಾಗೂ ನಾಗೇಂದ್ರ ಪುತ್ರನ್ ಮತ್ತು ಪ್ರದೀಪ್ ಅಲಿಯಾಸ್ ಎಸ್ಟಿಡಿ ಪ್ರದೀಪ್ ಬೈಕ್ನಲ್ಲಿ ಅಲ್ಲಿಗೆ ಬಂದಿದ್ದರು. ಈ ವೇಳೆ ನಾಗೇಂದ್ರ ಪುತ್ರನ್ ತಾನು ಸಾಮಾಜಿಕ ಕಾರ್ಯಕರ್ತ ಎಂದು ಪರಿಚಯಿಸಿಕೊಂಡು, ಮನೆಯ ಅಂಗಳದಲ್ಲಿದ್ದ ಅಕ್ಕಿ ಚೀಲಗಳ ದೃಶ್ಯವನ್ನು ಚಿತ್ರೀಕರಿಸಿರುವುದಾಗಿ ಹೇಳಿದ್ದಾನೆ. ಸರ್ಕಾರಿ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಕುರಿತು ದೂರು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣದಿಂದ ತಪ್ಪಿಸಿಕೊಳ್ಳಬೇಕಾದರೆ 2 ಲಕ್ಷ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹಣ ನೀಡಲು ಸಾಧ್ಯವಿಲ್ಲ ಎಂದು ದೂರುದಾರರು ತಿಳಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ 1 ಲಕ್ಷ ನೀಡಬೇಕು, ಇಲ್ಲವಾದರೆ ಜನರನ್ನು ಹಾಗೂ ತನ್ನ ಹುಡುಗರನ್ನು ಕರೆಸಿ ಹೊಡೆದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಸುಮಾರು ಮಧ್ಯಾಹ್ನ 2.45ರವರೆಗೂ ಹಣ ನೀಡದೆ ಸ್ಥಳದಿಂದ ತೆರಳುವುದಿಲ್ಲ ಎಂದು ಆರೋಪಿ ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಈ ವೇಳೆ ದೂರುದಾರರ ಮಕ್ಕಳು ಸ್ಥಳಕ್ಕೆ ಆಗಮಿಸಿದ ಬಳಿಕ ಆರೋಪಿಗಳು ಮತ್ತೆ ಅವಾಚ್ಯವಾಗಿ ನಿಂದಿಸಿ ಸ್ಥಳದಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳ ವಿರುದ್ಧ ಬೆದರಿಕೆ, ಹಣಕ್ಕೆ ಬೇಡಿಕೆ ಹಾಗೂ ಇತರ ಆರೋಪಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.