ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೆ. 3, 4, 6 ಮತ್ತು 7ರಂದು ವಿಶೇಷ ಸೇವೆ ರದ್ದು
Tuesday, September 01, 2026
ದಕ್ಷಿಣ ಭಾರತದ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆಪ್ಟೆಂಬರ್ 3, 4, 6 ಮತ್ತು 7ರಂದು ಕೆಲವು ವಿಶೇಷ ಧಾರ್ಮಿಕ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಆದರೆ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀದೇವರ ದರ್ಶನ ಹಾಗೂ ದೈನಂದಿನ ಪೂಜಾ ಕಾರ್ಯಕ್ರಮಗಳಲ್ಲಿ ಯಾವುದೇ ಅಡಚಣೆ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ 3 ಮತ್ತು 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ದಶಮಿ–ಏಕಾದಶಿ ಹಿನ್ನೆಲೆಯಲ್ಲಿ ಕೆಲವು ವಿಶೇಷ ಸೇವೆಗಳನ್ನು ನಡೆಸಲಾಗುವುದಿಲ್ಲ. ಸೆಪ್ಟೆಂಬರ್ 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸೆಪ್ಟೆಂಬರ್ 7ರಂದು ಏಕಾದಶಿ ಇರುವ ಕಾರಣ ಆಶ್ಲೇಷಬಲಿ, ನಾಗಪ್ರತಿಷ್ಠೆ ಹಾಗೂ ಮಹಾಭಿಷೇಕ ಸೇವೆಗಳು ನಡೆಯುವುದಿಲ್ಲ. ಈ ದಿನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಹಾಪೂಜೆ, ಶೇಷಸೇವೆ, ಅಭಿಷೇಕ, ಅರ್ಚನೆ ಸೇರಿದಂತೆ ದಿನನಿತ್ಯದ ಎಲ್ಲ ಪೂಜಾ ಸೇವೆಗಳು ಯಥಾವತ್ತಾಗಿ ನೆರವೇರಲಿವೆ ಎಂದು ದೇವಸ್ಥಾನ ಆಡಳಿತ ತಿಳಿಸಿದೆ.
ಕ್ಷೇತ್ರಕ್ಕೆ ಆಗಮಿಸಿ ಸರ್ಪಸಂಸ್ಕಾರ, ಆಶ್ಲೇಷಬಲಿ, ನಾಗಪ್ರತಿಷ್ಠೆ ಹಾಗೂ ಮಹಾಭಿಷೇಕ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲು ಉದ್ದೇಶಿಸಿರುವ ಭಕ್ತಾದಿಗಳು ಮೇಲ್ಕಂಡ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣ ಹಾಗೂ ಸೇವಾ ಮುಂಗಡ ಕಾಯ್ದಿರಿಸುವಿಕೆಯನ್ನು ಯೋಜಿಸಿಕೊಳ್ಳುವಂತೆ ದೇವಸ್ಥಾನ ಆಡಳಿತ ಮನವಿ ಮಾಡಿದೆ.