ರೋಟರಿ ಕ್ಲಬ್ ಮಣಿಪಾಲ್‌ಗೆ ಅತ್ಯುತ್ತಮ ಕ್ಲಬ್ ಸೇವಾ ಪ್ರಶಸ್ತಿ
ರೋಟರಿ ಇಂಟರ್‌ನ್ಯಾಷನಲ್ ಜಿಲ್ಲಾ 3182ರ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭವು 2026ರ ಆಗಸ್ಟ್ 29ರಂದು ಹಾಸನದಲ್ಲಿ ನಡೆದಿದ್ದು, ಈ ಸಮಾರಂಭದಲ್ಲಿ ರೋಟರಿ ಕ್ಲಬ್ ಮಣಿಪಾಲ್‌ಗೆ ದೊಡ್ಡ ಕ್ಲಬ್‌ಗಳ ವಿಭಾಗದಲ್ಲಿ ಅತ್ಯುತ್ತಮ ಕ್ಲಬ್ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಕ್ಲಬ್ ಕೈಗೊಂಡ ಶ್ಲಾಘನೀಯ ಮಾನವೀಯ ಹಾಗೂ ಸಮುದಾಯ ಸೇವಾ ಯೋಜನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಶಸ್ತಿ ಸಮಿತಿ ಅಧ್ಯಕ್ಷ ಪಿಡಿಜಿ ಸಿಎ ದೇವಾನಂದ್, ಮಾನವೀಯ ಸೇವೆಯನ್ನು ಸಂಭ್ರಮಿಸಲು ಹಾಗೂ ಅತ್ಯುತ್ತಮ ಸೇವಾ ಯೋಜನೆಗಳನ್ನು ಕೈಗೊಂಡ ರೋಟರಿ ಕ್ಲಬ್‌ಗಳನ್ನು ಗೌರವಿಸಲು ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಇಂತಹ ಗೌರವಗಳು ಇತರ ಕ್ಲಬ್‌ಗಳಿಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮತ್ತು ಅಗತ್ಯವಿರುವ ಜನರನ್ನು ತಲುಪಲು ಪ್ರೇರಣೆ ನೀಡುತ್ತವೆ ಎಂದು ಅವರು ತಿಳಿಸಿದರು.
ಐಪಿಡಿಜಿ ಪಾಲಾಕ್ಷ ಕೆ. ಅವರು ಎಲ್ಲಾ ಪ್ರಶಸ್ತಿ ವಿಜೇತ ಕ್ಲಬ್‌ಗಳಿಗೆ ಅಭಿನಂದನೆ ಸಲ್ಲಿಸಿ, ಸಮಾಜ ಸೇವೆಯಲ್ಲಿ ತೊಡಗಿರುವ ರೋಟೇರಿಯನ್ನರ ಸಮರ್ಪಿತ ಪ್ರಯತ್ನಗಳನ್ನು ಶ್ಲಾಘಿಸಿದರು. ರೋಟರಿ ಇಂಟರ್‌ನ್ಯಾಷನಲ್‌ನ “ಸ್ವಾರ್ಥಕ್ಕಿಂತ ಸೇವೆ ಶ್ರೇಷ್ಠ” ಎಂಬ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ತಮ್ಮ ಉತ್ತಮ ಕಾರ್ಯವನ್ನು ಮುಂದುವರಿಸುವಂತೆ ಅವರು ಸದಸ್ಯರಿಗೆ ಕರೆ ನೀಡಿದರು.
ರೋಟರಿ ಕ್ಲಬ್ ಮಣಿಪಾಲ್ ಪರವಾಗಿ ಅಧ್ಯಕ್ಷೆ ಶಶಿಕಲಾ ರಾಜವರ್ಮ, ವಾಣಿಶ್ರೀ ಹಾಗೂ ಖಜಾಂಚಿ ರತ್ನಾಕರ ಉದ್ಯಾವರ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ತಮ್ಮ ಕೃತಜ್ಞತೆ ವ್ಯಕ್ತಪಡಿಸಿದ ಶಶಿಕಲಾ ರಾಜವರ್ಮ , ಈ ಪ್ರಶಸ್ತಿ ರೋಟರಿ ಕ್ಲಬ್ ಮಣಿಪಾಲದ ಎಲ್ಲಾ ಸದಸ್ಯರ ಒಗ್ಗಟ್ಟಿನ ಪ್ರಯತ್ನ, ಸಮರ್ಪಣೆ ಮತ್ತು ತಂಡದ ಕಾರ್ಯದ ಫಲವಾಗಿದೆ ಎಂದು ಹೇಳಿದರು. ಹಾಗೂ ವಿಶೇಷವಾಗಿ ಸಹಾಯಕ ಗವರ್ನರ್ ಅಮಿತ್ ಅರವಿಂದ ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಸಹಕಾರಿಯಾಗಿತ್ತು, ಮಣಿಪಾಲ ರೋಟರಿ ಕ್ಲಬ್ ಕೈಗೊಂಡ ಯೋಜನೆಗಳು ಜನರ ಜೀವನದಲ್ಲಿ ಒಳ್ಳೆಯ ಪರಿಣಾಮಕಾರಿ ಬದಲಾವಣೆಯನ್ನು ತಂದಿವೆ. ಪರಿಸರ ಸಂರಕ್ಷಣೆಯ ಉತ್ತಮ ಯೋಜನೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ ಎಂದರು. ಸಮುದಾಯ ಸೇವೆಗೆ ಹೃತ್ಪೂರ್ವಕ ಬೆಂಬಲ ತೋರಿದ ಪ್ರತಿಯೊಬ್ಬ ಸದಸ್ಯರಿಗೂ ಅವರು ಧನ್ಯವಾದ ಸಲ್ಲಿಸಿದರು.