ಮಂಡ್ಯ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ: ಅಧೀಕ್ಷಕಿ ಶಾಂತಮ್ಮ ಬಳ್ಳಾರಿಗೆ ಎತ್ತಂಗಡಿ!
Monday, August 31, 2026
“ಜಿಲ್ಲಾ ಕಾರಾಗೃಹದಲ್ಲಿ ಲಂಚ ಕೊಟ್ಟರೆ ರಾಜಾತಿಥ್ಯ ಸಿಗುತ್ತದೆ”, ಎಂದು ಆರೋಪಿಸಿರುವ ವಿಚಾರಣಾ ಕೈದಿಗಳ ಪತ್ರ ಬಹಿರಂಗವಾದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಕಾರಾಗೃಹ ಅಧೀಕ್ಷಕಿ ಎಂ. ಶಾಂತಮ್ಮ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ.
ಶಾಂತಮ್ಮ ಅವರ ಕರ್ತವ್ಯಲೋಪ ಮೇಲ್ನೋಟಕ್ಕೆ ಕಂಡು ಬಂದಿದೆ. ಡಿಐಜಿ ಅವರಿಂದ ಸಮಗ್ರ ವಿಚಾರಣಾ ವರದಿ ಸ್ವೀಕೃತವಾಗುವವರೆಗೆ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಮುಂದುವರಿಸುವುದು ಸೂಕ್ತವಲ್ಲ. ಹೀಗಾಗಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವಿಶೇಷ ಕರ್ತವ್ಯದ ಮೇಲೆ ನಿಯೋಜಿಸಲಾಗಿದೆ’ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ಕುಮಾರ್ ಆದೇಶ ಹೊರಡಿಸಿದ್ದಾರೆ.
ಲೋಕಾಯುಕ್ತ ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಹುಸೇನ್ ಚಿಕಿತ್ಸೆ ಪಡೆಯುವ ನೆಪದಲ್ಲಿ ಮಿಮ್ಸ್ ಆಸ್ಪತ್ರೆಯಲ್ಲಿ ಗೆಳತಿ ಜತೆ ಇದ್ದಾಗ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ತಂಡಕ್ಕೆ ಈಚೆಗೆ ಸಿಕ್ಕಿಬಿದ್ದಿದ್ದ. ಮಂಡ್ಯ ಕಾರಾಗೃಹದ ಕರ್ಮಕಾಂಡಗಳು ಒಂದರ ಹಿಂದೆ ಒಂದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.