-->
 ಗಂಗೊಳ್ಳಿ ಅಳಿವೆಯಲ್ಲಿ ಮತ್ತೊಂದು ಬೋಟ್ ಮುಳುಗಡೆ; 6 ಮೀನುಗಾರರ ರಕ್ಷಣೆ

ಗಂಗೊಳ್ಳಿ ಅಳಿವೆಯಲ್ಲಿ ಮತ್ತೊಂದು ಬೋಟ್ ಮುಳುಗಡೆ; 6 ಮೀನುಗಾರರ ರಕ್ಷಣೆ


ಪಶ್ಚಿಮ ಕರಾವಳಿಯಲ್ಲಿ ಕಡಲ ಅಬ್ಬರ ಮುಂದುವರಿದಿದ್ದು, ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಬುಧವಾರ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಬೋಟಿನಲ್ಲಿದ್ದ ಆರು ಮಂದಿ ಮೀನುಗಾರರನ್ನು ಇತರೆ ಬೋಟಿನ ಮೀನುಗಾರರು ತಕ್ಷಣ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


ಗಂಗೊಳ್ಳಿ ಬಂದರಿನಿಂದ ಬುಧವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಕುಂಭಾಶಿ ಕೊರವಡಿಯ ಸಂತೋಷ್ ಎ. ಅವರಿಗೆ ಸೇರಿದ ‘ಮಂಜುನಾಥ ಸಾಗರ’ ಎಂಬ ತ್ರಿಸೆವೆಂಟಿ ಬೋಟ್ ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ನೀರಿನಲ್ಲಿ ಮುಳುಗಲು ಆರಂಭಿಸಿತು.

ಬೋಟ್ ಅಪಾಯದಲ್ಲಿರುವ ಮಾಹಿತಿ ತಿಳಿಯುತ್ತಿದ್ದಂತೆ ಇತರೆ ಮೀನುಗಾರರು ಪರ್ಸಿನ್ ಬೋಟ್ ಮೂಲಕ ಸ್ಥಳಕ್ಕೆ ಧಾವಿಸಿ, ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದರು. ಬಳಿಕ ನೀರಿನಲ್ಲಿ ಮುಳುಗುತ್ತಿದ್ದ ‘ಮಂಜುನಾಥ ಸಾಗರ’ ಬೋಟ್‌ನ್ನು ಮತ್ತೊಂದು ಬೋಟ್‌ನ ಸಹಾಯದಿಂದ ಎಳೆದು ಗಂಗೊಳ್ಳಿ ಬಂದರಿಗೆ ತರಲಾಯಿತು.

ಬೋಟ್ ಭಾಗಶಃ ಮುಳುಗಡೆಯಾದ ಪರಿಣಾಮ ಅದರಲ್ಲಿದ್ದ ಮೀನುಗಾರಿಕಾ ಬಲೆಗಳು ಹಾಗೂ ಇತರೆ ಸಲಕರಣೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಗಂಗೊಳ್ಳಿ ಅಳಿವೆ ಹಾಗೂ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್‌ಗಳು ಅಪಾಯಕ್ಕೆ ಸಿಲುಕುತ್ತಿರುವುದು ಮೀನುಗಾರರಲ್ಲಿ ಆತಂಕ ಮೂಡಿಸಿದೆ. ಕಳೆದ ವಾರವೂ ಇದೇ ಪ್ರದೇಶದ ಅರಬ್ಬಿ ಸಮುದ್ರದಲ್ಲಿ ಪರ್ಸಿನ್ ಬೋಟ್‌ವೊಂದು ಸಂಪೂರ್ಣ ಮುಳುಗಡೆಯಾಗಿತ್ತು. ಇದೀಗ ವಾರದೊಳಗೆ ಮತ್ತೊಂದು ಬೋಟ್ ಮುಳುಗಡೆಯಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.


Ads on article

Advertise in articles 1

advertising articles 2

Advertise under the article