-->
 ಸುನೀಲ್ ಕುಮಾರ್ ರಾಜೀನಾಮೆಗೆ ಒತ್ತಾಯ: ಕಾಂಗ್ರೆಸ್ ಪೋಸ್ಟರ್ ಅಭಿಯಾನಕ್ಕೆ ಪೊಲೀಸರ ತಡೆ

ಸುನೀಲ್ ಕುಮಾರ್ ರಾಜೀನಾಮೆಗೆ ಒತ್ತಾಯ: ಕಾಂಗ್ರೆಸ್ ಪೋಸ್ಟರ್ ಅಭಿಯಾನಕ್ಕೆ ಪೊಲೀಸರ ತಡೆ


ಕಾರ್ಕಳದಲ್ಲಿ ನಿರ್ಮಾಣವಾಗಿರುವ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಶಾಸಕ ಸುನೀಲ್ ಕುಮಾರ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.


ಕಾರ್ಕಳದಲ್ಲಿರುವ ಶಾಸಕ ಸುನೀಲ್ ಕುಮಾರ್ ಅವರ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಪರಶುರಾಮ ಥೀಂ ಪಾರ್ಕ್ ಕಾಮಗಾರಿಯಲ್ಲಿ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಈ ಕುರಿತು ಶಾಸಕ ಸುನೀಲ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.


ಪ್ರತಿಭಟನೆಯ ಮುಂದುವರಿದ ಭಾಗವಾಗಿ ಶಾಸಕ ಸುನೀಲ್ ಕುಮಾರ್ ಅವರ ಕಚೇರಿ ಹಾಗೂ ಮನೆಗೆ ಪೋಸ್ಟರ್ ಅಂಟಿಸಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ತಡೆದರು. ರಸ್ತೆ ಮಧ್ಯೆಯೇ ಕೆಲ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಈ ಹಿಂದೆ ಹಲವು ಆರೋಪಗಳು ಹಾಗೂ ವಿವಾದಗಳು ಕೇಳಿಬಂದಿದ್ದವು. ಕಾಮಗಾರಿಯ ಗುಣಮಟ್ಟ, ವೆಚ್ಚ ಮತ್ತು ಅನುಷ್ಠಾನದ ಕುರಿತು ಪ್ರಶ್ನೆಗಳು ಎದ್ದಿದ್ದವು. ಇದೀಗ ಇದೇ ವಿಚಾರ ಮತ್ತೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಶಾಸಕ ಸುನೀಲ್ ಕುಮಾರ್ ಅವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ಪೊಲೀಸರು ಹೆಚ್ಚುವರಿ ಭದ್ರತೆ ಕೈಗೊಂಡಿದ್ದರು. 


ಇದೇ ವೇಳೆ ಕಾಂಗ್ರೆಸ್‌ನ ಪೋಸ್ಟರ್ ಅಭಿಯಾನಕ್ಕೆ ಬಿಜೆಪಿ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದ್ದು, ಶಾಸಕ ಸುನಿಲ್ ಕುಮಾರ್ ಅವರ ಮನೆ, ಕಚೇರಿ ಹಾಗೂ ಬಿಜೆಪಿ ಕಚೇರಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ವಿವಿಧೆಡೆಗಳಿಂದ ಬಿಜೆಪಿ ಕಾರ್ಯಕರ್ತರು ಆಗಮಿಸಿದ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಪೋಸ್ಟರ್ ಅಭಿಯಾನಕ್ಕೆ ತಡೆ ನೀಡುವ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.


Ads on article

Advertise in articles 1

advertising articles 2

Advertise under the article