ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಶ್ರಮಗಳಿಗೆ 3,126 ಕೆಜಿ ಅಕ್ಕಿ ವಿತರಣೆ
Wednesday, September 02, 2026
ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ಸುತ್ತಮುತ್ತಲಿನ ನಾಲ್ಕು ಆಶ್ರಮಗಳಿಗೆ ಒಟ್ಟು 3,126 ಕೆಜಿ ಅಕ್ಕಿಯನ್ನು ಅನ್ನದಾಸೋಹಕ್ಕಾಗಿ ವಿತರಿಸುವ ಕಾರ್ಯಕ್ರಮಕ್ಕೆ ಅಂಬಲಪಾಡಿ ದೇವಸ್ಥಾನದ ಮುಂಭಾಗದಲ್ಲಿ ಕೃಷ್ಣ ಅಂಬಲಪಾಡಿ ಚಾಲನೆ ನೀಡಿದರು.
ವಿಶು ಶೆಟ್ಟಿ ಅಂಬಲಪಾಡಿ ಅವರ ನೇತೃತ್ವದಲ್ಲಿ ನಡೆದ ಈ ಸೇವಾ ಕಾರ್ಯದಲ್ಲಿ, ಅಸಹಾಯಕ ಸ್ಥಿತಿಯಲ್ಲಿ ಜೀವನ ಸಾಗಿಸಲು ಸಾಧ್ಯವಾಗದೆ ಆಶ್ರಮಗಳಲ್ಲಿ ಆಶ್ರಯ ಪಡೆದಿರುವ ನೂರಾರು ಮಂದಿಯ ಅನ್ನದಾಸೋಹಕ್ಕೆ ನೆರವಾಗುವ ಉದ್ದೇಶದಿಂದ ಅಕ್ಕಿ ಸಂಗ್ರಹಿಸಿ ವಿತರಿಸಲಾಯಿತು.
ವಿಶು ಶೆಟ್ಟಿ ಹಾಗೂ ಅವರ ಹಿತೈಷಿಗಳ ಸಹಕಾರದಿಂದ ಒಟ್ಟು 3,126 ಕೆಜಿ ಅಕ್ಕಿ ಸಂಗ್ರಹವಾಗಿದ್ದು, ಇದರಲ್ಲಿ 1,500 ಕೆಜಿ ಹೊಸಬೆಳಕು ಆಶ್ರಮಕ್ಕೆ, 1,000 ಕೆಜಿ ಸ್ವರ್ಗ ಆಶ್ರಮಕ್ಕೆ ಹಾಗೂ ಉಳಿದ ಅಕ್ಕಿಯನ್ನು ಕಾರುಣ್ಯ ಮತ್ತು ಉಪ್ಪೂರಿನ ಸ್ಪಂದನ ಆಶ್ರಮಕ್ಕೆ ಹಂಚಿಕೆ ಮಾಡಿ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೃಷ್ಣ ಅಂಬಲಪಾಡಿ, “ಆಡಂಬರ ರಹಿತ ಜನಸೇವೆಯೇ ಶ್ರೀಕೃಷ್ಣನ ನಿಜವಾದ ಸೇವೆ” ಎಂದು ಹೇಳಿದರು.
ಜಯಂತಿ ಅಂಬಲಪಾಡಿ ಅವರು ದೇವರ ಪ್ರಸಾದ ಅರ್ಪಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ರಾಮದಾಸ್ ಪಾಲನ್ ಉದ್ಯಾವರ ಅವರು ಸಹಕರಿಸಿದರು.