ಬೆಳ್ತಂಗಡಿ: ಡೆತ್ ನೋಟ್ ಬರೆದಿಟ್ಟು 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 14 ವರ್ಷದ ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬೈಪಾಡಿ ಕುರಿಯಾಳದಲ್ಲಿ ಆ.30ರಂದು ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಬೆಳ್ತಂಗಡಿ ನಿವಾಸಿ ಭರತ್ ಗೌಡ ಮತ್ತು ಪುಷ್ಪಾವತಿ ದಂಪತಿಯ ಏಕೈಕ ಪುತ್ರ ಶ್ರವಣ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಾಲಕನ ಮಾವ ಸತೀಶ್ ಗೌಡ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.30ರಂದು ಬೆಳಗ್ಗೆ ಸುಮಾರು 11.30ರ ವೇಳೆಗೆ ಓದುವುದಾಗಿ ಹೇಳಿ ಶ್ರವಣ್ ಕೊಠಡಿಗೆ ತೆರಳಿದ್ದ ಎನ್ನಲಾಗಿದೆ. ಈ ವೇಳೆ ತಂದೆ-ತಾಯಿ ತೋಟದ ಕೆಲಸಕ್ಕೆ ತೆರಳಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಬಳಿಕ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವುದು ಮನೆಯವರಿಗೆ ತಿಳಿದುಬಂದಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.
ಶ್ರವಣ್ ಬೆಳ್ತಂಗಡಿಯ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಪರೀಕ್ಷೆ ಹಾಗೂ ಶಿಕ್ಷಕರೊಬ್ಬರಿಂದ ಎದುರಿಸಿದ್ದ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ.
ಘಟನೆಗೂ ಒಂದು ದಿನ ಮೊದಲು ಶ್ರವಣ್‌ನ ಹುಟ್ಟುಹಬ್ಬದ ದಿನವೇ ಶಾಲೆಯಲ್ಲಿ ಶಿಕ್ಷಕರ ಸಭೆ ನಡೆದಿತ್ತು ಎನ್ನಲಾಗಿದೆ. ಸಭೆಯ ಬಳಿಕ ಬಾಲಕ ಮಂಕಾಗಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಭೆಯಲ್ಲಿ ಎಲ್ಲರ ಎದುರು ಬೈದಿರುವುದನ್ನು ಗಂಭೀರವಾಗಿ ತೆಗೆದುಕೊಂಡು ಆತ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.