ಕೃಷ್ಣಾಷ್ಟಮಿಗೆ ತಾಯಿ–ಮಗಳ ಕೃಷ್ಣಾಸುರ ವೇಷ: ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಿನ ಸಂಕಲ್ಪ
ಶ್ರೀಕೃಷ್ಣಾಷ್ಟಮಿ ಅಂಗವಾಗಿ ಉಡುಪಿಯ ಮಲ್ಪೆ ಲಕ್ಷ್ಮೀನಗರದ ಶ್ರೀ ಸಿದ್ದಿ ಇವೆಂಟ್ಸ್ ವತಿಯಿಂದ ಈ ಬಾರಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಿವ್ಯ ಸತೀಶ್ ಹಾಗೂ ಅವರ ಎಂಟು ವರ್ಷದ ಪುತ್ರಿ ಸಿದ್ದಿ ಎಸ್. ಕಾಮತ್ ಅವರು ಕೃಷ್ಣಾಸುರ ವೇಷ ಧರಿಸಿ ಜನರ ಗಮನ ಸೆಳೆಯಲಿದ್ದು, ಈ ಮೂಲಕ ಸಂಗ್ರಹವಾಗುವ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುವ ಸಂಕಲ್ಪ ಮಾಡಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿವ್ಯ ಸತೀಶ್ ಅವರು, ತಮ್ಮ ಮಗಳು ಸಿದ್ದಿ ಎಸ್. ಕಾಮತ್ ಪ್ರತೀ ವರ್ಷವೂ ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ವೇಷ ಧರಿಸುತ್ತಿದ್ದಾಳೆ. ಈ ಬಾರಿ ಮಗಳೊಂದಿಗೆ ತಾನೂ ಕೂಡ ಕೃಷ್ಣಾಸುರ ವೇಷ ಧರಿಸಿ, ಜನರಿಂದ ದೊರೆಯುವ ಸಹಕಾರವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲು ಮುಂದಾಗಿರುವುದಾಗಿ ತಿಳಿಸಿದರು.
ಸೆಪ್ಟೆಂಬರ್ 4 ಮತ್ತು 5ರಂದು ಉಡುಪಿ ಮಲ್ಪೆ ತೊಟ್ಟಂ ಭಾಗದಲ್ಲಿ ತಾಯಿ–ಮಗಳು ಕೃಷ್ಣಾಸುರ ವೇಷದಲ್ಲಿ ಸಂಚರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ನೀಡುವ ನೆರವನ್ನು ಅಗತ್ಯವಿರುವ ಬಡ ಮಕ್ಕಳ ಶಿಕ್ಷಣಕ್ಕೆ ಬಳಸಲಾಗುವುದು ಎಂದು ಅವರು ಹೇಳಿದರು.
ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ಸಾಧ್ಯವಾದಷ್ಟು ನೆರವು ನೀಡುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ದಿವ್ಯ ಸತೀಶ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಪೆ ಸಿದ್ದಿ ಐ ಕೇರ್ ಮಾಲೀಕ ಸತೀಶ್ ಕಾಮತ್, ಸಿದ್ದಿ ಎಸ್. ಕಾಮತ್, ರಕ್ಷಿತ್ (ಮುನ್ನ), ನಿತೇಶ್ ಹಾಗೂ ಡಾ. ದೀಪ ಉಪಸ್ಥಿತರಿದ್ದರು.