ಸೆ. 6ರಂದು ಕೇರಳ ಸಮಾಜಂ ಉಡುಪಿ ವತಿಯಿಂದ ಅದ್ದೂರಿ ಓಣಂ ಆಚರಣೆ
ಕೇರಳ ಸಮಾಜಂ ಉಡುಪಿ (ರಿ) ವತಿಯಿಂದ ದ್ವಿತೀಯ ವರ್ಷದ ಅದ್ದೂರಿ ಓಣಂ ಸಂಭ್ರಮಾಚರಣೆ ಸೆಪ್ಟೆಂಬರ್ 6ರಂದು ಉಡುಪಿಯ ಅಂಬಾಗಿಲು ಬಳಿಯ ಅಮೃತ್ ಗಾರ್ಡನ್ ಸಭಾಭವನದಲ್ಲಿ ನಡೆಯಲಿದೆ ಎಂದು ಕೇರಳ ಸಮಾಜಂ ಉಡುಪಿ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.
ಕಳೆದ ವರ್ಷ ನಡೆದ ಪ್ರಥಮ ವರ್ಷದ ಓಣಂ ಸಂಭ್ರಮಾಚರಣೆಗೆ ಸಾರ್ವಜನಿಕರು ಹಾಗೂ ಸಮಾಜದ ಸದಸ್ಯರಿಂದ ಅತ್ಯುತ್ತಮ ಬೆಂಬಲ ದೊರೆತು ಕಾರ್ಯಕ್ರಮ ಯಶಸ್ವಿಯಾಗಿತ್ತು. ಇದರ ಮುಂದುವರಿದ ಭಾಗವಾಗಿ ಈ ಬಾರಿ ಇನ್ನಷ್ಟು ಅದ್ದೂರಿಯಾಗಿ ಓಣಂ ಆಚರಿಸಲು ಕೇರಳ ಸಮಾಜಂ ನಿರ್ಧರಿಸಿದೆ.
ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಮಣಿಪಾಲ ಕೆಎಂಸಿ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ. ಶ್ಯಾಮ್ ಕೆ. ಅಶೋಕ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಅಭಿಲಾಷ್ ಪಿ.ವಿ., ಕೇರಳ ಸಮಾಜಂ ಮಂಗಳೂರು ಅಧ್ಯಕ್ಷ ಟಿ.ಕೆ. ರಾಜನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಪ್ರಸಿದ್ಧ ಮಲಯಾಳಂ ಚಲನಚಿತ್ರ ನಟಿಯರಾದ ಸುಚಿತ್ರ ನಾಯರ್ ಹಾಗೂ ನೀನಾ ಕುರುಪ್, ಪ್ರಸಿದ್ಧ ಬಾಲ ಕಲಾವಿದೆ ಮತ್ತು ಗಾಯಕಿ ರಾನಿಯ ರಫೀಕ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದ್ದಾರೆ.
ಓಣಂ ಸಂಭ್ರಮಾಚರಣೆಯ ಅಂಗವಾಗಿ ಪೂಕಳಂ ಸ್ಪರ್ಧೆ, ಮಕ್ಕಳಿಗಾಗಿ ವಿವಿಧ ಓಣಂ ಆಟಗಳು, ಕೇರಳ ಸಮಾಜಂ ಸದಸ್ಯರಿಂದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಮತ್ತು ಕಳರಿ ಪಯಟ್ಟು ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ ಕೇರಳದ ವಿಶೇಷ ಸಾಂಪ್ರದಾಯಿಕ ‘ಓಣಂ ಸಧ್ಯ’ ಭೋಜನ ಕೂಟವನ್ನು ಆಯೋಜಿಸಲಾಗಿದೆ.
ಕೇರಳದ ಸಾಂಪ್ರದಾಯಿಕ ಓಣಂ ಆಚರಣೆ, ಕಲೆ, ಸಂಸ್ಕೃತಿ ಹಾಗೂ ವೈವಿಧ್ಯಮಯ ಆಹಾರ ಪದ್ಧತಿಯನ್ನು ಕರಾವಳಿ ಭಾಗದ ಜನರಿಗೆ ಪರಿಚಯಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಕೇರಳ ಸಮಾಜಂ ಉಡುಪಿ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.
