ಕೃಷ್ಣನೂರಿನಲ್ಲಿ ಕಳೆಗಟ್ಟಿದ ಜನ್ಮಾಷ್ಟಮಿ ಸಂಭ್ರಮ: ವಿಟ್ಲಪಿಂಡಿಗೆ ಭರದ ಸಿದ್ಧತೆ
Wednesday, September 02, 2026
ಕೃಷ್ಣನೂರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಶ್ರೀಕೃಷ್ಣಮಠದ ರಥಬೀದಿ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ.
ಶ್ರೀಕೃಷ್ಣಾಷ್ಟಮಿಯ ಪ್ರಯುಕ್ತ ನಡೆಯಲಿರುವ ವಿಟ್ಲಪಿಂಡಿ ಮಹೋತ್ಸವದಲ್ಲಿ ಹುಲಿವೇಷ ಕುಣಿತ ಪ್ರಮುಖ ಆಕರ್ಷಣೆಯಾಗಿದ್ದು, ಈ ಬಾರಿ ಕೂಡ ಹುಲಿವೇಷಧಾರಿಗಳ ಕುಣಿತಕ್ಕೆ ಭಕ್ತರು ಹಾಗೂ ಪ್ರವಾಸಿಗರು ಕಾತರರಾಗಿದ್ದಾರೆ. ಹುಲಿವೇಷಧಾರಿಗಳಿಗೆ ನೋಟಿನ ಮಾಲೆ ಹಾಕುವುದು ಉಡುಪಿಯ ವಿಟ್ಲಪಿಂಡಿ ಸಂಭ್ರಮದೊಂದಿಗೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ಈ ಹಿನ್ನೆಲೆಯಲ್ಲಿ ಶ್ರೀಕೃಷ್ಣಮಠದಲ್ಲಿ ಹುಲಿವೇಷಧಾರಿಗಳಿಗೆ ಅರ್ಪಿಸಲು ನೋಟಿನ ಮಾಲೆಗಳ ತಯಾರಿ ಕಾರ್ಯವೂ ಭರದಿಂದ ನಡೆಯುತ್ತಿದೆ. ವಿವಿಧ ಮೌಲ್ಯದ ನೋಟುಗಳನ್ನು ಕಲಾತ್ಮಕವಾಗಿ ಜೋಡಿಸಿ ಮಾಲೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಪರ್ಯಾಯ ಶ್ರೀರೂರು ಮಠಾಧೀಶರಾದ ವೇದವರ್ಧನ ಶ್ರೀಗಳು ನೋಟಿನ ಮಾಲೆ ತಯಾರಿಕಾ ಸ್ಥಳಕ್ಕೆ ಭೇಟಿ ನೀಡಿ, ತಯಾರಿ ಕಾರ್ಯವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ನೋಟಿನ ಮಾಲೆಗಳನ್ನು ಸಿದ್ಧಪಡಿಸುವ ವಿಧಾನ ಹಾಗೂ ನಡೆಯುತ್ತಿರುವ ಸಿದ್ಧತೆಗಳ ಕುರಿತು ಮಾಹಿತಿ ಪಡೆದುಕೊಂಡರು.
ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿಯ ಶ್ರೀಕೃಷ್ಣಮಠದ ಸುತ್ತಮುತ್ತ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರ ಸ್ವಾಗತಕ್ಕೆ ಕೃಷ್ಣನೂರು ಸಜ್ಜಾಗುತ್ತಿದೆ.
.jpeg)

.jpeg)
